ಚಿಕ್ಕಬಳ್ಳಾಪುರ: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಾಗೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಆರೋಗ್ಯ ಸಚಿವರ ನಡುವಿನ ಕಿತ್ತಾಟ, ವೈಮನಸ್ಸಿಗೆ ಈಗ ಬರ ಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆ ಬಲಿಪಶು ಆಗುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಹೌದು, ಜಿಲ್ಲೆಯಲ್ಲಿ ಕೋವಿಡ್ -19 ಅಟ್ಟಹಾಸ ಮೆರೆದು ಈಗಾಗಲೇ ಇಬ್ಬರನ್ನು ಬಲಿ ಪಡೆದುಕೊಂಡಿದೆ. ಸೋಂಕಿತರ ಸಂಖ್ಯೆ 16ಕ್ಕೆ ಏರಿದೆ. ಜಿಲ್ಲೆಯ ಗೌರಿಬಿದನೂರಿಗೆ ಸೀಮಿತವಾಗಿದ್ದ ಕೊರೊನಾ ಈಗ ಜಿಲ್ಲಾ ಕೇಂದ್ರಕ್ಕೂ ಹಬ್ಬಿದೆ. ದಿನದಿಂದ ದಿನಕ್ಕೆ ಸೋಂಕು ದಟ್ಟವಾಗಿ ಹರಡುತ್ತಿದೆ. ಆದರೆ ಜಿಲ್ಲೆಯ ಆರೋಗ್ಯ ಇಲಾಖೆ ಸ್ಥಿತಿಗತಿಗಳನ್ನು ವಿಚಾರಿಸಬೇಕಿದ್ದ ಆರೋಗ್ಯ ಸಚಿವರು ಜಿಲ್ಲೆಗೆ ಕಾಲಿಡುತ್ತಿಲ್ಲ.
ಪ್ರಗತಿ ಪರಿಶೀಲನೆ ನಡೆಸಿಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮಲು ನಡುವಿನ ಮುಸುಕಿನ ಗುದ್ದಾಟ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಕೋವಿಡ್ -19 ಸಂಕಷ್ಟ ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ಆರೋಗ್ಯ ಇಲಾಖೆ ಹೊಣೆ ಹೊತ್ತಿರುವ ಶ್ರೀರಾಮಲು ಜಿಲ್ಲೆಗೆ ಆಗಮಿಸಿ ಇಲಾಖೆಯ ಪ್ರಗತಿ ಪರಿಶೀಲನೆ ಜೊತೆಗೆ ಇಲಾಖೆಯ ಆಗುಹೋಗಗಳ ಬಗ್ಗೆ ಚರ್ಚೆ ನಡೆಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಗುರುವಾರವಷ್ಟೆ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಅನಿಲ್ ಕುಮಾರ್ ಹೃದಯಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ವೆಂಟಿಲೇಟರ್‌ಗಳ ಕೊರತೆ: ಜಿಲ್ಲೆಗೆ ಅವಶ್ಯಕವಾದ 10 ವೆಂಟಿಲೇಟರ್‌ಗಳಿಗೆ ಜಿಲ್ಲಾಡಳಿತ ಬೇಡಿಕೆ ಸಲ್ಲಿಸಿದರೂ ಇದುವರೆಗೂ ಪೂರೈಕೆ ಆಗಿಲ್ಲ. ಐಸಿಯು ಘಟಕಗಳ ಸ್ಥಾಪನೆಗೆ ನೆರವು ಬೇಕಿದೆ. ಜೊತೆಗೆ ಕೊರೊನಾ ಸೋಂಕಿ ತರ ಪೈಕಿ 8 ಮಂದಿಯನ್ನು ಗುಣಮುಖ ಪಡಿಸುವಲ್ಲಿ ಇಲ್ಲಿನ ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ, ವೈದ್ಯರ ಹಾಗೂ ಸಿಬ್ಬಂದಿಯಲ್ಲಿ ಆತ್ಮಸ್ಥೆರ್ಯ ತುಂಬಬೇಕಿದ್ದ ಆರೋಗ್ಯ ಸಚಿವರು ವೈದ್ಯಕೀಯ ಶಿಕ್ಷಣ ಸಚಿವರೊಂದಿಗಿನ ವೈಮನಸ್ಸಿನಿಂದ ಜಿಲ್ಲೆಗೆ ಆಗಮಿಸದೇ ಇರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.
2 ಬಾರಿ ರಾಮುಲು ಸಭೆ ಮುಂದೂಡಿಕೆ
ಕಳೆದ ಮಾ.24 ರಂದು ಸಚಿವ ಬಿ.ಶ್ರೀರಾಮಲು ಜಿಲ್ಲೆಯ ಪ್ರವಾಸ ನಿಗದಿಯಾಗಿತ್ತು. ದಿನವಿಡೀ ಅಧಿಕಾರಿಗಳು ಸಚಿವರ ಆಗಮನಕ್ಕಾಗಿ ಜಿಲ್ಲಾಡಳಿತ ಭವನದಲ್ಲಿ ಕಾದು ಕುಳಿತಿದ್ದರು. ಆದರೆ ದಿಢಿರನೇ ಸಭೆ ರದ್ದಾಯಿತು. ಅದೇ ರೀತಿ ಮಾ.25 ರಂದು ಮಧ್ಯಾಹ್ನ 3 ಗಂಟೆಗೆ ಸಚಿವರ ಪ್ರವಾಸ ನಿಗದಿಯಾಗಿ ಕೊನೆ ಕ್ಷಣದಲ್ಲಿ ಪ್ರವಾಸ ಮೊಟಕುಗೊಳಿಸಿದರು.