ಬೆಂಗಳೂರು: ರಾಜ್ಯ ಖಜಾನೆ ಖಾಲಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿಯೇ ಬೆಂಬಲ ಇಲ್ಲ ಎಂಬ ವಿಷಯಗಳ ಕುರಿತು “ನೆರೆ ಬರ ಸಂತ್ರಸ್ತರ ಬಹಿರಂಗ ಅಧಿವೇಶನ’ದಲ್ಲಿ ವಸತಿ ಸಚಿವ ವಿ.ಸೋಮಣ್ಣ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಮಧ್ಯೆ ವಾದ-ಪ್ರತಿವಾದ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿವೇಶನಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಬಳಿಕ ಮಾತನಾಡುತ್ತಿದ್ದ ವಸತಿ ಸಚಿವ ಸೋಮಣ್ಣ ಅವರಿಗೆ ಎಚ್.ಎಸ್. ದೊರೆಸ್ವಾಮಿ ಅವರು, ನೆರೆ ಸಂತ್ರಸ್ತರಿಗೆ ನೆರವಾಗಲು “ಹಣ ಎಲ್ಲಿದೆ’? ಎಂದು ಮೂರ್‍ನಾಲ್ಕು ಬಾರಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಸಚಿವ, ಮನೆಕಟ್ಟಲು ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇವೆ.
ಖಜಾನೆಯಲ್ಲಿ ಹಣ ಇರುತ್ತದೆ. ಹೇಗೆ ತಲುಪಿಸುತ್ತೀರಾ ಎಂಬುದನ್ನು ನೀವು ಕೇಳಿ. ನಾಳೆ ಬೆಳಗ್ಗೆ ವಿಧಾನಸೌಧಕ್ಕೆ ಬನ್ನಿ, ಜತೆಯಲ್ಲಿ ಕುಳಿತು ಚರ್ಚಿಸಿ, ಹೇಗೆ ಹಣ ಬಿಡುಗಡೆ ಮಾಡುತ್ತೇವೆ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿಕೊಡುತ್ತೇವೆ ಎಂದರು. ಮುಂದಿನ 8-10 ದಿನದಲ್ಲಿ ಬೆಳೆ ಹಾನಿಗಳಿಗೆ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ನಿಯಮಾವಳಿಗಳು ಏನೇ ಇರಲಿ, ರೈತರಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.
ಬಳಿಕ ದೊರೆಸ್ವಾಮಿ ಅವರು ಮಾತನಾಡಿ, “ಯಡಿಯೂರಪ್ಪ ಅವರ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ನನ್ನ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಯಡಿಯೂರಪ್ಪ ಅವರನ್ನು ಮುಳುಗಿಸಬೇಕು ಎಂಬ ವಿಚಾರದಲ್ಲಿದೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ’ ಎಂದರು. ಇದಕ್ಕೆ ಠಾಕ್ಷೇಪ ವ್ಯಕ್ತಪಡಿಸಿದ ಸಚಿವ ಸೋಮಣ್ಣ, “ನೀವು ಹಾಗೇ ಹೇಳಬೇಡಿ. ಯಡಿಯೂರಪ್ಪ ಅವರಿಗೆ ಒಳಿತಾಗಲಿ ಎಂದು ಹರಸಬೇಕು, ಇನ್ನು ನೆರೆ ವಿಚಾರದಲ್ಲಿ ಕೆಲಸ ಮಾಡಿ ನಿಮ್ಮಿಂದಲೇ ಮೆಚ್ಚುಗೆ ಪಡೆಯುತ್ತೇವೆ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಶಾಸಕರು, ಸಂಸದರು, ಕಾರ್ಯಾಂಗ ಎಲ್ಲವೂ ನಮ್ಮ ಪಾಲಿಗೆ ಇಲ್ಲದಂತಾಗಿವೆ. ನೆರೆ ಸಂತ್ರಸ್ತರ ಹಾಗೂ ಬರದಿಂದ ಬಳಲುತ್ತಿರುವ ರೈತರ ಕಷ್ಟ ಕುರಿತು ಚರ್ಚಿಸಲು ಅಧಿವೇಶನದಲ್ಲಿ ಸಮಯವಿಲ್ಲದ ಕಾರಣ ನಮ್ಮ ಹಕ್ಕುಗಳನ್ನು ಮಂಡಿಸಲು ಈ ಅಧಿವೇಶನ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರ ನಮ್ಮ ಹಕ್ಕೊತ್ತಾಯಗಳನ್ನು ಆಲಿಸದಿದ್ದರೆ ಸಚಿವರ ಮನೆಗಳ ಮುಂದೆ ಧರಣಿ ನಡೆಸುತ್ತೇವೆ. 19 ವರ್ಷಗಳಲ್ಲಿ ಮೂರು ವರ್ಷ ನೆರೆ ಹಾಗೂ 14 ವರ್ಷ ಬರದಿಂದ ರಾಜ್ಯದ ಜನ ಬಳಲಿದ್ದು, ಇಲ್ಲಿನ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಒಂದು ಲಕ್ಷ ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ರೈತರು ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ರ್ಯಾಲಿ ನಡೆಸಿದರು.