ಚಿತ್ರದುರ್ಗ: ಮಳೆಯಿಂದ ಹಾನಿಗೀಡಾಗಿದ್ದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ಬೆಳಗ್ಗೆ ಜಿಲ್ಲೆಗೆ ಆಗಮಿಸಿದ ಶ್ರೀ ರಾಮುಲು ಹೊಳಲ್ಕೆರೆ ತಾಲ್ಲೂಕು ಲೋಕದೊಳಲು ಗ್ರಾಮದ ಬೆಟ್ಟದಲ್ಲಿ ಮಳೆಯಿಂದ ಕುಸಿದಿದ್ದ ರಂಗನಾಥ ಸ್ವಾಮಿ ದೇಗುಲವನ್ನು ವೀಕ್ಷಿಸಿದರು.ಇದೇ ವೇಳೆ ದೇವಸ್ಥಾನಕ್ಕೆ ಕಾಯಕಲ್ಪ ನೀಡಿ, ಬೆಟ್ಟ ಹತ್ತಲು ರಸ್ತೆ ಹಾಗೂ ಮೆಟ್ಟಿಲು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.
ಇಲ್ಲಿಂದ ಹೊಸದುರ್ಗ ತಾಲೂಕು ನೀರಗುಂದ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಕೆರೆ ಏರಿ ಹೊಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದ್ದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರೇಣುಕಾಚಾರ್ಯ ಅವರಿಗೆ ತರಾಟೆಗೆ ತೆಗೆದುಕೊಂಡ ಶ್ರೀರಾಮುಲು ಹರಿಯುವ ನೀರನ್ನು ಉಳಿಸಿ ನನಗೆ ತಿಳಿಸಿ ಎಂದು ತಮ್ಮ ಪೋನ್ ನಂಬರ್ ನೀಡಿದರು.
ಇದೇ ವೇಳೆ ಮಳೆಗೆ ಗೋಡೆ ಕುಸಿದು ಮೃತಪಟ್ಟಿದ್ದ ಶ್ರೀರಾಂಪುರದ ಬುಡೇನ್ ಬೀ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಇಲ್ಲಿಂದ ವೇದಾವತಿ ನದಿ ಮೈದುಂಬಿ ಹರಿದು ಹಾನಿಯಾದ ಕೆಲ್ಲೋಡು ಸ್ಥಳಗಳಿಗೆ ಭೇಟಿ ನೀಡಿದರು.