Advertisement

“ವೈದ್ಯರ ಕೊರತೆ ನೀಗಿಸಲು ಪ್ರಯತ್ನ’

10:10 AM May 03, 2019 | Team Udayavani |

ಸುಬ್ರಹ್ಮಣ್ಯ: ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ. ಆದರೆ ಯುವ ವೈದ್ಯರು ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿರುವುದು ಸಮಸ್ಯೆ ಸೃಷ್ಟಿಸಿದೆ. ಸರಕಾರವು ಕಟ್ಟುನಿಟ್ಟಿನ ನಿಯಮ ಪಾಲನೆ, ಕಡ್ಡಾಯ ಸೇವೆ ಮತ್ತು ನಿರಂತರ ನೇಮಕಾತಿ  ಪ್ರಕ್ರಿಯೆಗಳಿಂದ ಕೊರತೆ ಸರಿದೂಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಹೇಳಿದರು.

Advertisement

ಸರ್ಪಸಂಸ್ಕಾರ ಸೇವೆ ನಡೆಸಲು ಕುಟುಂಬದ ಜತೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕಾಗಮಿಸಿ ಗುರುವಾರ  ಮೊದಲ ದಿನದ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಅವರು ಪತ್ರಕರ್ತರ ಜತೆ ಮಾತನಾಡಿದರು.

ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಎಲ್ಲ ವ್ಯವಸ್ಥೆ ಗಳನ್ನು ಸರಕಾರ ಒದಗಿಸುತ್ತಿದೆ. ನೇಮಕಾತಿಯಲ್ಲಿ ಹೊಸ ನಿಯಮ ರೂಪಿಸಲಾಗುತ್ತಿದೆ. ವೈದ್ಯರ ಕೊರತೆ ನೀಗಿಸುವ ಪ್ರಯತ್ನ ನಡೆಯುತ್ತಿದೆ. ಹೊರರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ವೈದ್ಯರ ಸಂಖ್ಯೆ ಹೆಚ್ಚಿದೆ ಎಂದರು.
ಖಾಲಿ ಇರುವ 800 ಶುಶ್ರೂಷಕಿ ಹುದ್ದೆ ತುಂಬುವ ಪ್ರಕ್ರಿಯೆ ನಡೆಯು ತ್ತಿದೆ. ಆರೋಗ್ಯ ಇಲಾಖೆ ಯಲ್ಲಿ ಇನ್ನಷ್ಟು ವಿಭಾಗದ ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಭರ್ತಿಗೊಳಿಸುವ ಸಂಬಂಧ ಆರ್ಥಿಕ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಆಸ್ಪತ್ರೆಗಳ ಗ್ರೂಪ್‌ ಡಿ ಮತ್ತು ಫಾರ್ಮಸಿಸ್ಟ್‌ ಹುದ್ದೆಗಳನ್ನು ವಜಾಗೊಳಿಸುವ ಇತ್ತೀಚಿನ ಆದೇಶವನ್ನು ವಾಪಸ್‌ ಪಡೆದಿರುವುದಾಗಿ ಸಚಿವರು ತಿಳಿಸಿದರು.

108 ಆರೋಗ್ಯ ಕವಚ ಸೇವೆಯಲ್ಲಿ ಸಿಬಂದಿ ಮತ್ತು ಗುತ್ತಿಗೆ ವಿಚಾರವಾಗಿ ಕೆಲವು ಸಮಸ್ಯೆಗಳಿದ್ದು, ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಆರೋಗ್ಯ ಕರ್ನಾಟಕ ಆಯಷ್ಮಾನ್‌ ಭಾರತ್‌ ಯೋಜನೆಯಲ್ಲಿ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ 5 ಲಕ್ಷ ರೂ. ಮಿತಿಯೊಳಗೆ 1,600 ರೋಗಗಳಿಗೆ ಚಿಕಿತ್ಸೆ ಅವಕಾಶವಿದೆ. ಎಪಿಎಲ್‌ ಪಡಿತರ ಚೀಟಿ ಹೊಂದಿದವರಿಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ವೆಚ್ಚ ಭರಿಸಲಾಗುತ್ತಿದೆ. ರಾಜ್ಯದಲ್ಲಿ 4ರಿಂದ 5 ಕೋಟಿ ಮಂದಿ ಆರೋಗ್ಯ ಭಾಗ್ಯದ ಲಾಭ ಪಡೆಯುತ್ತಿದ್ದಾರೆ ಎಂದರು.

ಫ‌ಲಿತಾಂಶ ಬರುವ ತನಕ ಕಾಯೋಣ
ಲೋಕಸಭಾ ಚುನಾವಣೆ  ಫಲಿತಾಂಶ ಕುರಿತು ಪ್ರಶ್ನೆಗೆ ಉತ್ತರಿಸಲು ನಿರಾಸಕ್ತಿ ತೋರಿದ ಸಚಿವರು, ಯಾವುದೇ ಸರಕಾರವಿದ್ದರೂ ರಾಜಕೀಯ ಇದ್ದೇ ಇರುತ್ತದೆ  ಬಿಡಿ, ಫಲಿತಾಂಶ ಬರುವ ತನಕ‌ ಕಾಯೋಣ ಎಂದರು. ಹಿಂದೆಯೇ ನಿರ್ಧರಿಸಿದಂತೆ ದೇವರ ದರ್ಶನ ಪಡೆದು ಸೇವೆ ಸಲ್ಲಿಸಲು ಬಂದಿದ್ದೇನೆ ಎಂದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಚಿವರನ್ನು ಗೌರವಿಸಿದರು. ಸುಳ್ಯ ತಾ| ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ, ವೈದ್ಯ ತ್ರಿಮೂರ್ತಿ, ಹೇಮಂತ್‌ ಉಪಸ್ಥಿತರಿದ್ದರು.

Advertisement

ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಮತ್ತು ಸ್ಥಳೀಯರ ಅನುಕೂಲಕ್ಕಾಗಿ ಕುಕ್ಕೆಯಲ್ಲಿ 25 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಹೊಂದಲು ಆಡಳಿತ ಮಂಡಳಿ ಉತ್ಸುಕತೆಯಲ್ಲಿದೆ. ಜಾಗವನ್ನು ಕಾಯ್ದಿರಿಸಿದೆ. ದೇಗುಲದ ಕಡೆಯಿಂದ ಕಟ್ಟಡ ನಿರ್ಮಿಸಿದಲ್ಲಿ ವೈದ್ಯರು ಮತ್ತು ಇತರ ಸಿಬಂದಿ, ಸವಲತ್ತುಗಳನ್ನು ಸರಕಾರವೇ ನೀಡಿ ನಿರ್ವಹಣೆಯ ಹೊಣೆಯನ್ನು ಆರೋಗ್ಯ ಇಲಾಖೆ ಹೊರಲಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಈ ಸಂಬಂಧ ಆಡಳಿತವು ನಿರ್ಣಯ ತೆಗೆದುಕೊಂಡು ಪ್ರತಿಯನ್ನು ಕೂಡಲೇ ಸರಕಾರಕ್ಕೆ ಕಳುಹಿಸಿಕೊಡುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next