Advertisement

3ನೇ ಅಲೆ: ಮಕ್ಕಳ ರಕ್ಷಣೆಗೆ ಸಿದ್ಧರಾಗಿ

08:31 PM Jun 11, 2021 | Team Udayavani |

ಗದಗ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಸಂಭವನೀಯ 3ನೇ ಅಲೆಯಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೊರೊನಾ ಸಂಭಾವ್ಯ 3 ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್‌ ಸೋಂಕಿನ 3ನೇ ಅಲೆಯಿಂದ ಅಧಿಕ ಮಕ್ಕಳು ಕೋವಿಡ್‌ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆಗಳ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರೊಂದಿಗೆ ಆರೋಗ್ಯ ಸಮೀಕ್ಷೆ ನಡೆಸಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್‌ ಕೇರ್‌ ವ್ಯವಸ್ಥೆ ಕಲ್ಪಿಸಬೇಕು. 0-5 ಹಾಗೂ 6-18 ವಯಸ್ಸಿನ ಮಕ್ಕಳನ್ನು ಪ್ರತ್ಯೇಕವಾಗಿಸಿ ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಒದಗಿಸಬೇಕು. ಮಕ್ಕಳಿಗೆ ಸೋಂಕು ತಗುಲಿದಲ್ಲಿ ಮಗುವಿನೊಂದಿಗೆ ತಾಯಿಯೂ ಇರಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಹೇಳಿದರು.

ಮಕ್ಕಳ ಸಹಾಯವಾಣಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಸಹಾಯವಾಣಿ ಕ್ರೋಢೀಕೃತ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಬೇಕು. ಕೊರೊನಾ ಸೋಂಕು ಹೆಚ್ಚಾಗಿ ಅಪೌಷ್ಟಿಕ, ಅಸ್ತಮಾ ಹಾಗೂ ಹೃದ್ರೋಗವಿರುವ ಮಕ್ಕಳಿಗೆ ತಗಲುವ ಸಾಧ್ಯತೆ ಅಧಿಕವಾಗಿದ್ದು, ಜಿಲ್ಲೆಯಲ್ಲಿನ ಅಪೌಷ್ಟಿಕ ಮಕ್ಕಳಿಗೆ ಉತ್ತಮ ಆಹಾರ ನೀಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಸೂಕ್ತ ಕ್ರಮ ವಹಿಸಬೇಕು. ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿರುವ ಮಕ್ಕಳ ಮೇಲೆ ಇಲಾಖಾಅಧಿಕಾರಿಗಳು ನಿಗಾ ವಹಿಸಬೇಕೆಂದು ಸೂಚಿಸಿದರು.

ಶಾಸಕ ಎಚ್‌.ಕೆ.ಪಾಟೀಲ ಮಾತನಾಡಿ, ಸೋಂಕು ದೃಢಪಟ್ಟ ಮಕ್ಕಳ ಮಾಹಿತಿಯನ್ನು ವಿಧಾನಸಭಾ ಕ್ಷೇತ್ರವಾರು ವಿಂಗಡಿಸಿ ನೀಡಬೇಕು. ಶೀಘ್ರವೇ ಮಕ್ಕಳಿಗೆ ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲಿ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಬೆಡ್‌ ಹಾಗೂ ವೆಂಟಿಲೇಟರ್‌ಗಳ ಸಿದ್ಧತೆ ಮಾಡಿಕೊಳ್ಳಬೇಕು. ಸೋಂಕಿನಿಂದ ಮಕ್ಕಳ ಜೀವ ಹಾನಿಯಾಗದಂತೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆಗನುಸಾರವಾಗಿ ಮಕ್ಕಳ ತಜ್ಞರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳ ಬೇಕು. ಮಕ್ಕಳ ತಜ್ಞರ ಕೊರತೆಯಿದ್ದು ಕೊರತೆ ನೀಗಿಸಲು ಸಚಿವರು ಮುಂದಾಗಬೇಕು. ಖಾಯಂ ನೇಮಕಾತಿ ಸಾಧ್ಯವಾಗದಿದ್ದಲ್ಲಿ ಗುತ್ತಿಗೆ ಆಧಾರದ ಮೂಲಕ ಮಕ್ಕಳ ತಜ್ಞರನ್ನು ಜಿಲ್ಲೆಗೆ ನೀಡಬೇಕೆಂದು ಹೇಳಿದರು. ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು, ಜಿಪಂ ಸಿಇಒ ಭರತ್‌ ಎಸ್‌. ಮಾತನಾಡಿ, ಸಂಭವನೀಯ ಕೋವಿಡ್‌ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅಗತ್ಯದ ಎಲ್ಲ ಕ್ರಮಗಳನ್ನು ವಹಿಸಲಾಗಿದೆ. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿ ಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ಸೂಕ್ತ ಯೋಜನೆ ರೂಪಿಸಿ ಚಿಕಿತ್ಸೆ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸತೀಶ್‌ ಬಸರಿಗಿಡದ ಮಾತನಾಡಿ, ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಗುರುತಿಸಲಾಗಿದೆ. ಜಿಮ್ಸ್‌ ಆಸ್ಪತ್ರೆಯಲ್ಲಿ 33, ಮುಂಡರಗಿ, ನರಗುಂದ, ರೋಣ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10, ಶಿರಹಟ್ಟಿಯಲ್ಲಿ 5 ಸೇರಿದಂತೆ ಒಟ್ಟು 68 ಹಾಸಿಗೆಗಳನ್ನು 0-18 ವಯಸ್ಸಿನ ಮಕ್ಕಳಿಗೆ ಮೀಸಲಿರಿಸಲಾಗಿದೆ. ಜಿಮ್ಸ್‌ನಲ್ಲಿ ಹೆಚ್ಚುವರಿಯಾಗಿ 100 ಬೆಡ್‌ಗಳನ್ನು ಮೀಸಲಿಡಲು ಯೋಜನೆ ರೂಪಿಸಲಾಗಿದೆ ಎಂದರು. ಜಿಲ್ಲಾ ಸಮೀಕ್ಷಣಾಧಿ ಕಾರಿ ಡಾ|ಜಗದೀಶ ನುಚ್ಚಿನ ಮಾತನಾಡಿ, 2020ರಲ್ಲಿ 0-18 ವಯಸ್ಸಿನ 28,100 ಮಕ್ಕಳ ಗಂಟಲು ದ್ರವ ಮಾದರಿ ಶೇಖರಿಸಿ ಪರೀಕ್ಷೆಗೊಳಪಡಿಸಲಾಗಿದ್ದು, 981ಮಕ್ಕಳು ಸೋಂಕು ದೃಢಪಟ್ಟಿತ್ತು. 2021ರಲ್ಲಿ 51,279 ಮಕ್ಕಳ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 1381 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಈ ಪೈಕಿ ಪ್ರಸುತ 89 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಸೋಂಕಿಗೆ ಜಿಲ್ಲೆಯಲ್ಲಿ ಯಾವುದೇ ಮಗು ಮರಣ ಹೊಂದಿರುವುದಿಲ್ಲ ಎಂದು ಮಾಹಿತಿ ಒದಗಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್‌ ಎ ಮಾತನಾಡಿ, ಜಿಲ್ಲೆಯಲ್ಲಿ 19 ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಇವುಗಳಲ್ಲಿ ಒಟ್ಟು 1161 ಮಕ್ಕಳು ದಾಖಲಾಗಿದ್ದರು. ಇದರಲ್ಲಿ 1059 ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಪ್ರಸ್ತುತ 103 ಮಕ್ಕಳು ಪಾಲನಾ ಸಂಸ್ಥೆಗಳಲ್ಲಿದ್ದಾರೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಕಳೆದ ಒಂದು ವರ್ಷದ ಅವ ಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಇತರೆ ಸೇರಿದಂತೆ ಒಟ್ಟು 373 ಮಕ್ಕಳಿಗೆ 45,89,000 ರೂ. ಪಾವತಿಸಿದೆ. ಜತೆಗೆ ಪ್ರಾಯೋಜಕತ್ವ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 100 ಫಲಾನುಭವಿಗಳಿಗೆ 11,57,000 ರೂ. ನೀಡಲಾಗಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ 51, ಮುಂಡರಗಿ 26, ಗದಗ 68, ರೋಣ 51, ನರಗುಂದ 47 ಒಟ್ಟಾರೆ 243 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಇವರೆಲ್ಲರಿಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ ಎಂದರು. ಸಭೆಯಲ್ಲಿ ಶಾಸಕ ರಾಮಣ್ಣ ಲಮಾಣಿ, ದ್ರಾûಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಎಸ್ಪಿ ಯತೀಶ್‌ ಎನ್‌., ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಎಂ., ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ, ಆರ್‌ ಸಿಎಚ್‌ ಅಧಿ ಕಾರಿ ಡಾ|ಬಿ.ಎಂ.ಗೊಜನೂರ, ಮಕ್ಕಳ ರಕ್ಷಣಾಧಿ ಕಾರಿ ಅವಿನಾಶ ಗೊಟಖೀಂಡಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next