ತಿರುವನಂತಪುರಂ: ಭಾರತದ ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ್ದ ಕೇರಳದ ಮೀನುಗಾರಿಕಾ ಸಚಿವ ಸಾಜಿ ಚೆರಿಯಾನ್ ವಿರುದ್ಧ ಸಾರ್ವಜನಿಕವಾಗಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ (ಜುಲೈ 06) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.
ಮಾಧ್ಯಮಗಳ ವರದಿ ಪ್ರಕಾರ, ಸಿಪಿಐಎಂ ಪಾಲಿಟ್ ಬ್ಯೂರೋ ಸಭೆಯಲ್ಲಿ ಸಾಜಿ ಹೇಳಿಕೆ ಕುರಿತು ಚರ್ಚೆ ನಡೆದ ನಂತರ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಾಲಿಟ್ ಬ್ಯೂರೋ ಸೂಚಿಸಿರುವುದಾಗಿ ಹೇಳಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಚಿವ ಸಂಪುಟದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚರಿಯಾನ್ ಭಾರತದ ಸಂವಿಧಾನವನ್ನು ಟೀಕಿಸಿ ಮಾಡಿದ ಭಾಷಣದ ವಿಡಿಯೋ ವೈರಲ್ ಆಗಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ಇದನ್ನೂ ಓದಿ:ಮುಂಬಯಿಯಲ್ಲಿ ಮುಂದುವರಿದ ವರ್ಷಧಾರೆ; ಭೂಕುಸಿತ-ತಗ್ಗುಪ್ರದೇಶ ಜಲಾವೃತ, ಟ್ರಾಫಿಕ್ ಜಾಮ್
ಇತ್ತೀಚೆಗೆ ಮಲ್ಲಪಲ್ಲಿಯ ಪಟ್ಟಣಂತಿಟ್ಟದಲ್ಲಿ ಸಚಿವ ಸಾಜಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ, ನಮ್ಮ ಸಂವಿಧಾನವನ್ನು ತುಂಬಾ ಸುಂದರವಾಗಿ ರಚಿಸಲಾಗಿದೆ ಎಂದು ನಾವೆಲ್ಲರೂ ಹೆಮ್ಮೆಯಿಂದ ಹೇಳುತ್ತೇವೆ. ಆದರೆ ನನ್ನ ಪ್ರಕಾರ ನಮ್ಮ ದೇಶದ ಸಂವಿಧಾನವನ್ನು ಹೆಚ್ಚಿನ ಜನರು ಲೂಟಿ ಹೊಡೆಯಲು ಅನುಕೂಲವಾಗುವಂತೆ ರಚಿಸಲಾಗಿದೆ ಎಂದು ಆರೋಪಿಸಿದ್ದರು.
“ಬ್ರಿಟಿಷರು ಹೇಗೆ ಬರೆದಿಟ್ಟಿದ್ದಾರೋ ಅದೇ ರೀತಿ ಭಾರತೀಯರು ಸಂವಿಧಾನ ರಚಿಸಿದ್ದಾರೆ. ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷವಾಗಿದೆ. ನನ್ನ ಪ್ರಕಾರ ಇದೊಂದು ದೇಶದ ಜನರಿಗೆ ಲೂಟಿ ಹೊಡೆಯಲು ಅನುಕೂಲವಾಗುವ ಸುಂದರ ಸಂವಿಧಾನ ಎಂದು ಹೇಳುತ್ತೇನೆ” ಎಂಬುದಾಗಿ ಸಾಜಿ ದೂರಿದ್ದರು.
ಮಂಗಳವಾರ(ಜುಲೈ 05) ಟೆಲಿವಿಷನ್ ಮಾಧ್ಯಮಗಳಲ್ಲಿ ಸಾಜಿ ಭಾಷಣದ ವಿಡಿಯೋ ಪ್ರಸಾರವಾದ ನಂತರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಸಚಿವ ಸಾಜಿ ಸಂವಿಧಾನದ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.