Advertisement

ಸಹಕಾರಿ ಅಧಿಕಾರಿಗಳಿಂದ ರೈತರಿಗೆ ಅನುಕೂಲವಾಗಲಿ : ಸಚಿವ ಎಸ್.ಟಿ. ಸೋಮಶೇಖರ್

07:21 PM Jun 30, 2021 | Team Udayavani |
  • ಪರೀಕ್ಷಾರ್ಥ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಆಡಳಿತಾತ್ಮಕ ವಿಷಯಗಳ ಕಾರ್ಯಾಗಾರಕ್ಕೆ ಚಾಲನೆ
  • ಸಹಕಾರಿಗಳಿಗೆ ಗೌರವ ಕೊಡಿ; ಎಸ್ ಟಿ ಎಸ್
  • ಕುಟುಂಬಕ್ಕೂ ಕೊಡಿ ಸಮಯ; ಸಚಿವರ ಕಿವಿಮಾತು
  • ಸಮಯ ಪರಿಪಾಲನೆ, ಶಿಸ್ತು, ಪಾರದರ್ಶಕತೆ ಬಗ್ಗೆ ಅಧಿಕಾರಿಗಳಿಗೆ ಸಚಿವರ ಕಿವಿಮಾತು

ಬೆಂಗಳೂರು: ಸಹಕಾರ ಸಂಘಗಳಿಗೂ ರೈತರಿಗೂ ನೇರ ಸಂಬಂಧವಿದೆ. ಹೀಗಾಗಿ ಇಲ್ಲಿ ಕೆಲಸ ಮಾಡುವವರು ನೇರವಾಗಿ ಅನ್ನದಾತರಿಗೆ ಸಂಬಂಧಿಸಿದ, ಅವರಿಗೆ ಅನುಕೂಲವನ್ನು ಮಾಡಿಕೊಡುವ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ. ಹೀಗಾಗಿ ಇಲ್ಲಿ ಸಮಯ ಪರಿಪಾಲನೆ, ಶಿಸ್ತು, ಪಾರದರ್ಶಕತೆ ಬಹಳ ಮುಖ್ಯವಾಗುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪರೀಕ್ಷಾರ್ಥ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಕಿವಿಮಾತು ಹೇಳಿದರು.

Advertisement

ವಿಕಾಸಸೌಧದಲ್ಲಿ ಪರೀಕ್ಷಾರ್ಥ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಆಡಳಿತಾತ್ಮಕ ವಿಷಯಗಳ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರ ಸಭೆಯಲ್ಲಿ ಮಾತನಾಡಿದ ಸಚಿವರು, ಇಲ್ಲಿ ಈಗ ನೂತನವಾಗಿ ಸೇರ್ಪಡೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇನ್ನೂ 30 ವರ್ಷಗಳ ಕಾಲ ಇಲ್ಲಿಯೇ ಕಾರ್ಯ ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಸಹಕಾರ ಕ್ಷೇತ್ರ ಮತ್ತು ಇಲಾಖೆಗಳಲ್ಲಿ ಆರಂಭದ 2 ವರ್ಷಗಳಲ್ಲಿ ಕಲಿಯುವ ಕೆಲಸದ ಮೇಲೆ ಮುಂದಿನ ಯಶಸ್ಸು  ನಿಂತಿರುತ್ತದೆ ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.

ಸಹಕಾರಿಗಳಿಗೆ ಗೌರವ ಕೊಡಿ :  ಎಸ್ ಟಿ ಎಸ್

ಇಲ್ಲಿ ಪ್ರಮುಖವಾಗಿ ಸಹಕಾರಿಗಳಿಗೆ ಗೌರವವನ್ನು ಕೊಡಬೇಕು. 45 ಸಾವಿರ ಸಹಕಾರ ಸಂಘಗಳು ಇದ್ದು, ಬಹುತೇಕ ಸಂಘಗಳು ರೈತರಿಗೆ ಸಂಬಂಧಪಟ್ಟ ಸಹಕಾರಿ ಸಂಘಗಳೇ ಆಗಿವೆ. ಹೀಗಾಗಿ ಇಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಸೇವಾ ಮನೋಭಾವವನ್ನು ಉಳ್ಳವರಾಗಿರಬೇಕು. ಇಂದಿನ ಕೆಲಸವನ್ನು ಇಂದೇ ಮಾಡಿ ಮುಗಿಸಬೇಕು. ಆಗ ಹೆಚ್ಚಿನ ಹೊರೆ ಯಾರ ಮೇಲೂ ಬೀಳದು ಎಂದು ಸಚಿವರಾದ ಎಸ್ ಟಿ ಎಸ್ ಸಲಹೆ ನೀಡಿದರು.

ಕುಟುಂಬಕ್ಕೂ ಕೊಡಿ ಸಮಯ : ಸಚಿವರ ಕಿವಿಮಾತು

Advertisement

ಇಲ್ಲಿ ನೀವು ದಕ್ಷತೆಯಿಂದ ಕಾರ್ಯನಿರ್ವಹಣೆಯನ್ನು ಮಾಡಬೇಕು ನಿಜ. ಸಹಕಾರ ಕೆಲಸದ ಜೊತೆ ಜೊತೆಯಲ್ಲಿಯೇ ನೀವು ನಿಮ್ಮ ಕುಟುಂಬದವರಿಗೂ ಸಮಯವನ್ನು ಮೀಸಲಿಡಬೇಕು. ಮತ್ತು ಅವರ, ನಿಮ್ಮ ಆರೋಗ್ಯದ ಕಡೆಯೂ ಗಮನಹರಿಸಿಕೊಳ್ಳಬೇಕು. 100 ವರ್ಷಗಳ ಇತಿಹಾಸ ಇರುವ ಸಹಕಾರಿ ಕ್ಷೇತ್ರಕ್ಕೆ ಇಂದು ಹೊಸದಾಗಿ ಸೇರ್ಪಡೆಗೊಂಡಿರುವ ಯುವ ಸಮೂಹ ನೀವಾಗಿದ್ದೀರಿ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ದಕ್ಷ ಸೇವೆಯನ್ನು ನೀಡಿ. ನಿಮ್ಮ ಅತ್ಯುತ್ತಮ ಸೇವೆಯು ಸಹಕಾರಿ ಇಲಾಖೆಗೆ ಮುಂದಿನ ದಾರಿದೀಪವಾಗಲಿ ಎಂದು ಆಶಿಸುತ್ತೇನೆ ಎಂಬುದಾಗಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮಾಜಿ ಸಹಕಾರ ಸಚಿವರಾದ ಜಿ.ಟಿ.ದೇವೇಗೌಡ ರವರು, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ತುಷಾರ್ ಗಿರಿನಾಥ್ ರವರು, ಸಹಕಾರ ಇಲಾಖೆಯ ನಿಬಂಧಕರಾದ ಜಿಯಾವುಲ್ಲ ರವರು, ಅಪೆಕ್ಸ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ದೇವರಾಜ್ ರವರ, ಕೆಎಂಎಫ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ರವರು,  ಇಲಾಖೆ ಹಿರಿಯ ಅಧಿಕಾರಿಗಳಾದ ದಿವಾಕರ್, ವೆಂಕಟಸ್ವಾಮಿ, ಗೋಪಾಲಕೃಷ್ಣ ರವರು, ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ ಗೌಡ ರವರು, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ದಿನೇಶ್ ಗೂಳಿಗೌಡ ರವರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇನ್ನು,  32 ಮಂದಿ ಕರ್ನಾಟಕ ಕೋಆಪರೇಟಿವ್ ಸರ್ವಿಸ್ ನ ಅಸಿಸ್ಟೆಂಡ್ ರಿಜಿಸ್ಟ್ರಾರ್ ಆಗಿ ಒಂದು ವರ್ಷ ಪ್ರೊಬೇಷನರಿ ಹಂತವನ್ನು ಪೂರೈಸಿದ್ದಾರೆ. ಇವರಿಗೆ ಸಹಕಾರ ಇಲಾಖೆಯ ಸಂಪೂರ್ಣ ಪರಿಚಯವನ್ನು ಮಾಡಿಕೊಡಲಾಗುವುದು. ಜೊತೆಗೆ 5 ಮಂದಿ ಅಡಿಶನಲ್ ರಿಜಿಸ್ಟ್ರಾರ್ ಗಳು ಇದ್ದಾರೆ. ಇವೆರಲ್ಲರೂ ಇನ್ನೂ ಹಲವಾರು ವರ್ಷಗಳ ಕಾಲ ಸಹಕಾರ ಇಲಾಖೆಯಲ್ಲಿ ಕಾರ್ಯನಿರ್ವಹಣೆಯನ್ನು ಮಾಡುವುದರಿಂದ ಅವರು ಇಲ್ಲಿ ಕೆಲಸವನ್ನು ಮಾಡಬೇಕಾಗುತ್ತದೆ. ಹೀಗಾಗಿ ಇಲಾಖೆಯ ಒಟ್ಟಾರೆ ಮಾಹಿತಿ, ಕಾರ್ಯನಿರ್ವಹಣೆ ವಿಧಾನ ಇತ್ಯಾದಿ ವಿಷಯಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಕೊಡಿಸುವ ಕೆಲಸ ಆಗುತ್ತಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಒಂದು ವರ್ಷ ಕೋವಿಡ್ ಅವಧಿಯಲ್ಲಿ ಬಹಳ ಅತ್ಯುತ್ತಮವಾಗಿ ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡಿದ್ದು, ಮುಖ್ಯಮಂತ್ರಿಗಳು ಸಹ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇದಲ್ಲದೆ, ಇವರೆಲ್ಲರಿಗೂ ಇಲಾಖೆಯಿಂದ ಒಂದು ಸನ್ಮಾನವನ್ನು ಹಮ್ಮಿಕೊಳ್ಳುವ ಉದ್ದೇಶವೂ ನಮ್ಮದಾಗಿತ್ತು. ನಾಳೆಯಿಂದ ಇವರೆಲ್ಲ ಸಹಾಯಕ ನಿಬಂಧಕರಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯಾಗಿ ಕಾರ್ಯನಿರ್ವಹಣೆ ಮಾಡಬೇಕು? ಎಂಬಿತ್ಯಾದಿಗಳ ಬಗ್ಗೆ ಇಲ್ಲಿ ಅವರಿಗೆ ಕಾರ್ಯಾಗಾರಲ್ಲಿ ಮಾಹಿತಿಯನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು

ನಮಗೆ ಇಬ್ಬರೇ ಕ್ಯಾಪ್ಟನ್ : ಸಚಿವ ಸೋಮಶೇಖರ್

ನಮಗೆ ಪ್ರತ್ಯೇಕವಾಗಿ ಯಾವುದೇ ಕ್ಯಾಪ್ಟನ್ ಗಳಾಗಲೀ, ನಾಯಕರಾಗಲೀ ಇಲ್ಲ. ಮುಖ್ಯಮಂತ್ರಿಗಳಾಗಿ ಬಿ.ಎಸ್.ಯಡಿಯೂರಪ್ಪ ಅವರು ಕ್ಯಾಪ್ಟನ್ ಆದರೆ, ಶಾಸಕರಾಗಿ, ಪಕ್ಷದ ಸದಸ್ಯನಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಕ್ಯಾಪ್ಟನ್. ಈ ಇಬ್ಬರು ಬಿಟ್ಟರೆ ನಮಗೆ ಬೇರೆ ಯಾವ ಕ್ಯಾಪ್ಟನ್ ಗಳೂ ರಾಜ್ಯದಲ್ಲಿ ಇಲ್ಲ ಎಂದು ಸಚಿವರಾದ ಸೋಮಶೇಖರ್ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ : ಎಲ್ ಐ ಸಿ ಯ ಜೀವನ್ ಲಾಭ್ ಯೋಜನೆ ಯೋಜನೆಯ ಬಗ್ಗೆ ನಿಮಗೆ ತಿಳಿದಿದೆಯೇ..? ಮಾಹಿತಿ ಇಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next