Advertisement

ಬೃಹತ್‌ ಕೃಷಿ ಮೇಳಕ್ಕೆ ಸಚಿವ ರೇವಣ್ಣ ಚಾಲನೆ

07:27 AM Feb 18, 2019 | Team Udayavani |

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕೃಷಿ ಮೇಳಕ್ಕೆ ಸಾವಿರಾರು ಜನರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ವಿವಿಧ ತಳಿಯ ಜಾನುವಾರುಗಳು, ಶ್ವಾನಗಳು, ಫ‌ಲ -ಪುಷ್ಪಗಳನ್ನು ಕಂಡು ಖುಷಿಪಟ್ಟರು. ಕೃಷಿ ಮೇಳಕ್ಕೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. 

Advertisement

ಗ್ರಾಮೀಣ ಪ್ರದೇಶದಿಂದ ರೈತರು ಕೃಷಿ ಮೇಳಕ್ಕೆ ಆಗಮಿಸಲು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರವಾಗಿದ್ದರಿಂದ ನಗರದ ನಾಗರೀಕರೂ ಮೇಳಕ್ಕೆ ಆಗಮಿಸಿದ್ದರಿಂದ ಕೃಷಿ ಮೇಳಕ್ಕೆ ಕಳೆ ಕಟ್ಟಿ ಮಳಿಗೆಗಳಲ್ಲಿ ಜನಜಂಗುಳಿ ಕಂಡು ಬಂದಿದ್ದಲ್ಲದೆ ಖರೀದಿಯ ಭರಾಟೆಯೂ ಕಂಡು ಬಂದಿತು. 

ಕೃಷಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಭಾನುವಾರ ಚಾಲನೆ ನೀಡಿದರು. ಶನಿವಾರ ಆರೋಗ್ಯಮೇಳಕ್ಕೆ ಹಾಕಿದ್ದ ಮಳಿಗೆಗಳಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಮೀನುಗಾರಿಕೆ, ಅರಣ್ಯ ಇಲಾಖೆಗಳು ತಮ್ಮ ಇಲಾಖೆಗಳ ಕಾರ್ಯಕ್ರಮ, ಪ್ರಗತಿ, ಇತ್ತೀಚಿನ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಿದವು. 

ಕೃಷಿ ಉಪಕರಣಗಳ ಪ್ರದರ್ಶನ: ಕೃಷಿ ಸಂಬಂಧಿ ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಹಮ್ಮಿಕೊಂಡು ರೈತರಿಗೆ ಮಾಹಿತಿ ಒದಗಿಸಿದವು. ಬಿತ್ತನೆ, ನಾಟಿಯ ತಂತ್ರಗಳು, ಟ್ರ್ಯಾಕ್ಟರ್‌, ಟಿಲ್ಲರ್‌, ಮರಹತ್ತುವ ಸಾಧನಗಳು, ಔಷಧಿ ಸಿಂಪಡಣೆಯ ಯಂತ್ರಗಳ ಪ್ರದರ್ಶನ, ಯಾಂತ್ರೀಕೃತ ಸ್ವಯಂ ಚಾಲಿತ ಹನಿ ನೀರಾವರಿ ರೈತರನ್ನು ಆಕರ್ಷಿಸಿದವು. ಯಾಂತ್ರೀಕೃತ ಕೃಷಿ, ಸಾವಯವ ಕೃಷಿಯ ಮಾಹಿತಿ, ಉಪ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯೂ ಇತ್ತು. 

ತೋಟಗಾರಿಕೆ ಇಲಾಖೆಯು ಹೊಸ ಸಂಶೋಧನೆ, ಆಲೂಗಡ್ಡೆಯ ವಿವಿಧ ತಳಿಗಳು, ಹೈಡ್ರೋಫೋನಿಕ್ಸ್‌ ಹಾಗೂ ವರ್ಟಿಕಲ್‌ ಗಾರ್ಡ್‌ನ್‌ ಪ್ರದರ್ಶನ, ವಿವಿಧ ತಳಿಗಳ ಕಸಿ ಸಸಿ, ಹೂವಿನ ಗಿಡಗಳು, ತಕಕಾರಿ ಗಿಡಗಳ ಮಾರಾಟ, ಹೂ, ಬೀಜಗಳ ಮಳಿಗೆಗಳು, ಸಸ್ಯ ಸಂರಕ್ಷಣಾ ಔಷಧಿಗಳು ಮಳಿಗೆಗಳಲ್ಲಿ ಲಭ್ಯವಿದ್ದವು. 

Advertisement

ಮೀನಿನ ಖಾದ್ಯಗಳ ಮಾರಾಟ: ಮೀನುಗಾರಿಕೆ ಇಲಾಖೆಯು ಒಂದು ನೀರಿನ ಹೊಂಡವನ್ನು ನಿರ್ಮಿಸಿ ಅಲ್ಲಿ ಮೀನು ಮರಿಗಳ ಸಾಕಾಣಿಕೆ ಪ್ರದರ್ಶನ ಹಾಗೂ ಮತ್ತೂಂದು ಮಳಿಗೆಯಲ್ಲಿ ಮೀನಿನ ಖಾದ್ಯಗಳ ಮಾರಾಟದ ವ್ಯವಸ್ಥೆಯಿತ್ತು. ಮೇಳಕ್ಕೆ ಬಂದವರು ಅಲ್ಲಿ ಮೀನಿನ ಖ್ಯಾದ್ಯಗಳನ್ನು ಸವಿದರು.
 
ಜಾನುವಾರುಗಳ ಪ್ರದರ್ಶನ: ಪಶುಪಾಲನಾ ಇಲಾಖೆ ಮತ್ತು ಪಶುವೈದ್ಯಕೀಯ ಕಾಲೇಜುಗಳ ಮಳಿಗೆಗಳಲ್ಲಿ ಶ್ವಾನಗಳ ಪ್ರದರ್ಶನ, ಮಾರಾಟ, ವಿವಿಧ ತಳಿಗಳ ಜಾನುವಾರುಗಳ ಪ್ರದರ್ಶನವಿತ್ತು. ಹಳ್ಳಿಕಾರ್‌ ತಳಿಯ ಹೋರಿಗಳು, ಅಮೃತ್‌ಮಹಲ್‌ ತಳಿ, ಗಿರ್‌, ಎಚ್‌ಎಫ್ ತಳಿಯ ಹಸುಗಳು, ಮುರ್ರಾ ಎಮ್ಮೆಗಳು, ಬನ್ನೂರು, ಬಂಡೂರು ತಳಿಯ ಕುರಿಗಳು, ವಿವಿಧ ತಳಿಗಳ ಕೋಳಿಗಳು, ವಿಶೇಷವಾಗಿ ಉಷ್ಟ್ರಪಕ್ಷಿಗಳ ಪ್ರದರ್ಶನ ಗಮನಸೆಳೆದವು. 

ಕುಕ್ಕಟಗಳ ಮಳಿಗೆಗಳಲ್ಲಿ ಉಷ್ಟಪಕ್ಷಿಯ ಸಾಕಾಣಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡ ಜನರು ಅವುಗಳಿಗೆ ಇರುವ ಬೇಡಿಕೆ ಕೇಳಿ ಆಚ್ಚರಿಪಟ್ಟರು. ಉಷ್ಟ್ರಪಕ್ಷಿಯ ಒಂದು ಕೆ.ಜಿ ಮಾಂಸಕ್ಕೆ 1000 ರೂ ಬೆಲೆ, ಮೊಟ್ಟೆಗೆ 500 ರೂ. ಮತ್ತು ಪ್ರದರ್ಶನದಲ್ಲಿದ್ದ 1800 ಗ್ರಾಂ ತೂಕದ ಮೊಟ್ಟೆಗಳ ಗಾತ್ರ ಕಂಡು ಅಚ್ಚರಿ ವ್ಯಕ್ತಪಡಿಸಿದರು.

ಹತ್ತಾರು ಮಳಿಗೆಗಳಲ್ಲಿ ಇಷ್ಟೆಲ್ಲಾ ಪ್ರದರ್ಶನ ಮತ್ತು ಮಾಹಿತಿ ಪಡೆದುಕೊಂಡು ಬಂದವರಿಗೆ ಸುಸ್ತಾದರೆ ಅವರು ಕುಳಿತುಕೊಳ್ಳಲು ಪೆಂಡಾಲಿನ ವ್ಯವಸ್ಥೆಯನ್ನೂ ಕೃಷಿ ಮೇಳದಲ್ಲಿ ಮಾಡಲಾಗಿತ್ತು. ಅಲ್ಲಿ ಕೃಷಿ ತಜ್ಞರಿಂದ ವೇದಿಕೆಯಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಿಂದ ಬಂದಿದ್ದ ತಜ್ಞರು ಉಪನ್ಯಾಸ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next