Advertisement

ಗ್ರಾಮೀಣ ಕ್ಷೇತ್ರದ ಅಭಿವೃದ್ದಿಗೆ ದೃಢ ಸಂಕಲ್ಪ

04:14 PM Feb 15, 2021 | Team Udayavani |

ಬೆಳಗಾವಿ: ಮುಂದಿನ ದಿನಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ದೃಢ ಸಂಕಲ್ಪ ಮಾಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ಇಲ್ಲಿಯ ಕ್ಲಬ್‌ ರಸ್ತೆಯ ಸಿಪಿಎಡ್‌ ಮೈದಾನದಲ್ಲಿಬಿಜೆಪಿ ಗ್ರಾಮೀಣ ಮಂಡಲ ವತಿಯಿಂದ ನಡೆದ ಗ್ರಾಪಂ  ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು. ಗ್ರಾಪಂನಲ್ಲಿ ಸೋತ ಅಭ್ಯರ್ಥಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕು. ಸೋತವರು, ಗೆದ್ದವರು ನಮ್ಮವರೇ ಎಂಬ ಪರಂಪರೆ ಗೋಕಾಕ ಹಾಗೂ ಅರಭಾಂವಿ ಕ್ಷೇತ್ರದಲ್ಲಿ ಬೆಳೆದುಕೊಂಡು ಬಂದಿದೆ. ಚುನಾವಣೆಯಾದ ಬಳಿಕ ಇಬ್ಬರನ್ನೂ ಕರೆಯಿಸಿ ಒಗ್ಗೂಡಿಸಿ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತೇವೆ. ಇದೇ ಪರಂಪರೆ ಬೆಳಗಾವಿ ಗ್ರಾಮೀಣದಲ್ಲಿಯೂ ಇರಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ನನ್ನ ನಂಬಿ ಬಹಳಷ್ಟು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಅವರೆಲ್ಲರನ್ನು ಮತ್ತೆ ಬಿಜೆಪಿಗೆ ಕರೆ ತರುತ್ತೇನೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ನನ್ನವರು. ಮುಂದಿನ ಚುನಾವಣೆಯಲ್ಲಿ 60 ಸಾವಿರ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು. ಐವತ್ತು ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದರೆ ಅದು ಸೋಲು ಅಂದುಕೊಳ್ಳುತ್ತೇನೆ ಎಂದು ಜಾರಕಿಹೊಳಿ ಹೇಳಿದರು.

ಹಿರೇಬಾಗೇವಾಡಿಯಲ್ಲಿ ರಾಣಿ ಚನ್ನಮ್ಮ ವಿವಿ ಸ್ಥಾಪನೆಗಾಗಿ ಕೆರೆ ಕೆಲಸ ನಿಲ್ಲಿಸಲಾಗಿದೆ. ಮುಂದೆ ಈ ಕೆರೆ ಕಾಮಗಾರಿ ಮುಂದುವರಿಸಲಾಗುವುದು. ಯಾರೂ ಹೆದರುವ ಅಗತ್ಯವಿಲ್ಲ. ಗ್ರಾಮೀಣದಲ್ಲಿ ಯಾವ ಕೆಲಸ  ಆಗಬೇಕು ಎಂಬುದು ನಮ್ಮ ಬಳಿ ಬಂದರೆ ಮಾಡಿಕೊಡಲಾಗುವುದು ಎಂದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಪಂಚಾಯಿತಿ ಗಟ್ಟಿಗೊಳಿಸುವ ಕೆಲಸ ಎಲ್ಲರೂ ಮಾಡಬೇಕು. ಗೋಕಾಕಕ್ಕೆ ನೀಡುವ ಅನುದಾನಕ್ಕಿಂತ ಹೆಚ್ಚಿನ ಅನುದಾನ ಗ್ರಾಮೀಣ ಕ್ಷೇತ್ರಕ್ಕೆ ನೀಡಬೇಕು. ಗ್ರಾಮೀಣಕ್ಕೆ ಹೆಚ್ಚು ಒತ್ತು ನೀಡಬೇಕು.ಹಿಂದುಳಿದ ಕ್ಷೇತ್ರ ಬಲಪಡಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

Advertisement

ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಮಾತನಾಡಿ, ಮುಂದಿನ ಸಲ ಚುನಾವಣೆಯಲ್ಲಿ ಮತ್ತೆ ಭಗವಾ ಹಾರಿಸಿ, ಪೇಟಾ ಕಟ್ಟಿಕೊಂಡು ಬಂದು ಬಿಜೆಪಿ ಗೆಲ್ಲಿಸಬೇಕಾಗಿದೆ. ನಿಮ್ಮ ಸಾಮರ್ಥ್ಯ ತೋರಿಸಬೇಕಾದರೆ ಈಗಿನಿಂದಲೇ ಕೆಲಸ ಶುರು ಮಾಡಬೇಕು. ಗ್ರಾಮೀಣದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಹೇಳಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಲ್ವಾಮಾ ಮೇಲೆ ದಾಳಿ ನಡೆಸಿ ಯೋಧರನ್ನು ಕೊಂದವರಿಗೆ ಪ್ರಧಾನಿ ಮೋದಿ ಸರ್ಜಿಕಲ್‌ ಸ್ಟೆ ùಕ್‌ ಮೂಲಕ ಪಾಠ ಕಲಿಸಿದ್ದಾರೆ. ಮೋದಿ ವಿಶ್ವಮಾನ್ಯ ನಾಯಕನಾಗಿ ಬೆಳೆಯುತ್ತಿದ್ದಾರೆ. ಬಿಜೆಪಿ ಸಂಘಟಿಸಲು ಎಲ್ಲ ಕಾರ್ಯಕರ್ತರ ಶ್ರಮವಿದೆ. ಗ್ರಾಪಂ ಸದಸ್ಯರು ಪಕ್ಷದ ಬೆನ್ನೆಲುಬು. ಹೀಗಾಗಿ ಅವರನ್ನು ಸತ್ಕರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಭಾರತದ ಬಗ್ಗೆ ಮೋದಿಗೆ ಅಭಿಮಾನವಿದೆ. ಆದರೆ ರಾಹುಲ್‌ಗೆ ಪಾಕಿಸ್ತಾನ, ಚೀನಾ ಬಗ್ಗೆ ಅಭಿಮಾನವಿದೆ ಎಂದರು. ಬಿಜೆಪಿ ಉಪಾಧ್ಯಕ್ಷ ಯುವರಾಜ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ರಂಜನಾ ಕೋಲಕಾರ, ವೀರಭದ್ರ ಪೂಜಾರಿ, ಮನೋಹರ ಕಡೋಲಕರ, ಕಿರಣ ಜಾಧವ, ಶಿವಾಜಿ ಸುಂಠಕರ, ಪೃಥ್ವಿ ಸಿಂಗ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next