Advertisement

‘ಖಾತೆ ಸಮಸ್ಯೆ ಬಗೆಹರಿಸಲು ಸೂಚನೆ’

03:25 AM Jul 05, 2017 | Karthik A |

ಪುತ್ತೂರು: ಖಾತೆ ನೀಡಿಕೆ ಮತ್ತು ಕಟ್ಟಡ ಪರವಾನಿಗೆಗೆ ತಾಂತ್ರಿಕ ಸಲಹೆ ನೀಡುವಿಕೆ ನಿಯಮಗಳನ್ನು ಬಿಗಿಗೊಳಿಸಿರುವ ಕಾರಣ ನಗರ ಪ್ರದೇಶಗಳಲ್ಲಿ ಖಾತೆ ಸಿಗದೇ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದ್ದು, ಇದನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಮಂಗಳವಾರ ಪುತ್ತೂರಿಗೆ ಭೇಟಿ ನೀಡಿದ ಸಚಿವರನ್ನು ಕಾಂಗ್ರೆಸ್‌ ಮುಖಂಡರು ಮತ್ತು ನಾಗರಿಕ ಸಮಿತಿ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಅಗತ್ಯ ಉದ್ದೇಶಗಳಿಗೆ ಜನಸಾಮಾನ್ಯರು ಖಾತೆ ಕೇಳಲು ಹೋದರೆ ನಗರಸಭೆಯಲ್ಲಿ ಖಾತೆ ನೀಡುತ್ತಿಲ್ಲ. ನಗರಾಭಿವೃದ್ಧಿ ಇಲಾಖೆ ನೀಡಿದ ಆದೇಶವನ್ನು ತೋರಿಸುತ್ತಿದ್ದಾರೆ ಎಂದರು.

Advertisement

ಜನ ಸಾಮಾನ್ಯರಿಗೆ ಸಮಸ್ಯೆ
ಪುತ್ತೂರು ನಗರ ಯೋಜನಾ ಪ್ರಾಧಿಕಾರದವರು ಕಟ್ಟಡ ಪರವಾನಿಗೆಗೆ ತಾಂತ್ರಿಕ ಸಲಹೆ ನೀಡುತ್ತಿಲ್ಲ. ಕಾರಣ ಕೇಳಿದರೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಂದ ಬಂದ ಆದೇಶವನ್ನು ಉಲ್ಲೇಖೀಸುತ್ತಿದ್ದಾರೆ. ಈ ಎರಡು ಆದೇಶಗಳಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಎರಡೂ ಆದೇಶಗಳಿಗೆ ಕಾರಣವಾದ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು, ಸ್ಥಳದಲ್ಲಿದ್ದ ಸಹಾಯಕ ಕಮಿಷನರ್‌ ಡಾ| ರಘುನಂದನ ಮೂರ್ತಿ ಅವರಿಗೆ ಮನವಿ ಹಸ್ತಾಂತರಿಸಿದರು.

ಇತ್ಯರ್ಥವಾಗುವ ಭರವಸೆ 
ಜನರಿಗೆ ಸಮಸ್ಯೆಯಾಗದಂತೆ ಸಮಸ್ಯೆ ಬಗೆಹರಿಸಲು ಸೂಚಿಸಿ ಸಮಸ್ಯೆ ಇತ್ಯರ್ಥವಾಗುವ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿ ತೆರಳಿದ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ ಮತ್ತು ನಾಗರಿಕ ಸಮಿತಿಯ ಮುಖಂಡ ಹಾಗೂ ಪುತ್ತೂರು ಅಲ್ಪಸಂಖ್ಯಾಕ ಕಾಂಗ್ರೆಸ್‌ ವಿಭಾಗದ ಅಧ್ಯಕ್ಷ ಇಸಾಕ್‌ ಸಾಲ್ಮರ ತಿಳಿಸಿದ್ದಾರೆ. ನಿಯೋಗದಲ್ಲಿ ಪುತ್ತೂರು ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿಲ್ಮಾ, ಮುಖಂಡರಾದ ಜತ್ತಪ್ಪ ಗೌಡ, ನೂರುದ್ದೀನ್‌ ಸಾಲ್ಮರ, ಹಸೈನಾರ್‌ ಬನಾರಿ, ಲ್ಯಾನ್ಸಿ ಮಸ್ಕರೇನ್ಹಸ್‌, ಯಾಕೂಬ್‌ ಹಾಜಿ ದರ್ಬೆ ಮುಂತಾದವರಿದ್ದರು. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ ವಿವರಣೆ ನೀಡಿ ಈಗಾಗಲೇ ಪ್ರಾಧಿಕಾರದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಎ.ಸಿ. ಅವರನ್ನು  ಖುದ್ದಾಗಿ ಕಂಡು ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅಹವಾಲು ಸ್ವೀಕಾರ
ಸಚಿವರ ಭೇಟಿ ಸಂದರ್ಭ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು ಗಡಿ ಪ್ರದೇಶ ಗಾಳಿಮುಖಕ್ಕೆ ಬಸ್‌ ಬರುತ್ತಿಲ್ಲ ಎಂದು ದೂರಿದರು. ನೀವು ಅಂದು ಬಸ್‌ ವ್ಯವಸ್ಥೆ ಮಾಡಿಸಿದ್ದೀರಿ. ಈಗ ಬರುತ್ತಿಲ್ಲ. ನಾಳಿನ ಜನಸಂಪರ್ಕ ಸಭೆಯಲ್ಲಿ ನಾವು ಇದನ್ನೇ ಕೇಳುತ್ತೇವೆ ಎಂದರು. ತತ್‌ಕ್ಷಣ ಶಾಸಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next