ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವುದರ ಜೊತೆಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ (ಜೂನ್ 14) ಆಯೋಜಿಸಿದ್ದ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ಸದಸ್ಯರು ಅನಾಥರಲ್ಲ. ಅವರ ನೋವಿನಲ್ಲಿ ಪಕ್ಷ ಹಾಗೂ ವೈಯಕ್ತಿಕವಾಗಿ ನಾನು ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು.
ಕೋವಿಡ್ ಸೋಂಕಿನಿಂದ ದುಡಿಯುವ ವ್ಯಕ್ತಿಗಳು ಮೃತಪಟ್ಟು ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಇದನ್ನು ಮನಗಂಡು ರಾಜ್ಯ ಸರ್ಕಾರ ನೆರವಿಗೆ ಧಾವಿಸಿದೆ. ಬಿಪಿಎಲ್ ಕುಟುಂಬಗಳಲ್ಲಿ ಕೋವಿಡ್ ಸೋಂಕಿನಿಂದ ವಯಸ್ಥರು ಮೃತಪಟ್ಟಲ್ಲಿ, ಆ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಇದು ಸರ್ಕಾರದ ಬದ್ಧತೆಗೆ ಸಾಕ್ಷಿ. ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳು ಎಂದು ಅವರು ಹೇಳಿದರು.
ಸದ್ಯ ಕೋವಿಡ್ ಮಹಾಮಾರಿ ಹಲವರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ನಿಟ್ಟಿನಲ್ಲಿ ಕಂಗೆಟ್ಟ ಜನರಿಗೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಈಗ ನೆರವು ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ, ಕೋವಿಡ್ ಸೋಂಕಿನಿಂದ ಮೃತಪಟ್ಟ ಪದ್ಮನಾಭನಗರ ಕ್ಷೇತ್ರದ ಮೂರು ಕುಟುಂಬಗಳಿಗೆ ಒಂದೊಂದು ಕುಟುಂಬಕ್ಕೆ 3 ಲಕ್ಷ ರೂಪಾಯಿಯಂತೆ 3 ಲಕ್ಷ ರೂಪಾಯಿ ಧನಸಹಾಯವನ್ನು ಸಚಿವರು ಮಾಡಿದರು. ಇದೇ ವೇಳೆ, ಸಾವಿರಾರು ಬಡವರಿಗೆ ಪಡಿತರ ಕಿಟ್ ಗಳನ್ನು ವಿತರಿಸಲಾಯಿತು.