Advertisement

ಮಾಜಿ ಶಾಸಕರ ಸಮಾಧಿ ದ್ವಂಸಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ: ಸಚಿವ ಆರ್‌. ಅಶೋಕ್‌

08:17 PM Dec 28, 2022 | Team Udayavani |

ಸುವರ್ಣ ವಿಧಾನಸೌಧ: ಮಾಜಿ ಸಚಿವ ದಿವಂಗತ ತಿಪ್ಪೇಸ್ವಾಮಿ ಅವರ ಸಮಾಧಿ ದ್ವಂಸಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

Advertisement

ವಿಧಾನ ಪರಿಷತ್ತಿನಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಮೋಹನ್‌ ಕೊಂಡಜ್ಜಿ, ಚಿತ್ರದುರ್ಗದಲ್ಲಿ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಸಮಾಧಿ ಸ್ಥಳಕ್ಕೆ ಕೆಲ ಕಿಡಿಗೇಡಿಗಳು ತೆರಳಿ ಜೆಸಿಬಿ ಯಂತ್ರದಿಂದ ಸಮಾಧಿ ದ್ವಂಸಗೊಳಿಸಿದ್ದಾರೆ.

ಈ ಬಗ್ಗೆ ಪ್ರಶ್ನಿಸಲು ತಿಪ್ಪೇಸ್ವಾಮಿ ಅವರ ಪುತ್ರಿ ಸ್ಥಳಕ್ಕೆ ತೆರಳಿದಾಗ, ದೌರ್ಜನ್ಯ ಮಾಡುವುದರ ಜತೆಗೆ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಸಮಾಧಿ ಜಾಗ ಸ್ವಾಧೀನಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಆರ್‌. ಅಶೋಕ್‌, ಮಾಜಿ ಶಾಸಕರ ಸಮಾಧಿ ದ್ವಂಸ ಮಾಡಿರುವುದು ಖಂಡನೀಯ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ, ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮ ಜರುಗಿಸಲಾಗುವುದು. ಅಲ್ಲದೆ, ನಕಲಿ ದಾಖಲೆ ಬಗ್ಗೆ ಪರಿಶೀಲನೆ ನಡೆಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

ಕೆರೆ ಒತ್ತುವರಿ;ತಕ್ಷಣವೇ ಸರ್ವೆಗೆ ಸೂಚನೆ
ಸುವರ್ಣ ವಿಧಾನಸೌಧ: ಬೀದರ ಜಿಲ್ಲೆ ಹಳ್ಳದಕೇರಿ ಗ್ರಾಮದಲ್ಲಿನ ಕೆರೆ ಒತ್ತುವರಿ ಬಗ್ಗೆ ಸರ್ವೆಗೆ ನೀರು ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಅದು ಸುಳ್ಳಾಗಿದ್ದರೆ ತಕ್ಷಣವೇ ಸರ್ವೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

Advertisement

ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ ಸದಸ್ಯ ಅರವಿಂದ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2016ರಲ್ಲಿ ನಡೆಸಿದ ಸರ್ವೆಯಲ್ಲಿ 1.23 ಎಕರೆ ಒತ್ತುವರಿಯಾಗಿರುವುದು ಕಂಡು ಬಂದಿದೆ. ಇದೇ ವರ್ಷದ ಜೂನ್‌ನಲ್ಲಿ ಸರ್ವೆಗೆ ಮುಂದಾದರೆ ನೀರು ಇದೆ ಎಂಬ ಕಾರಣಕ್ಕೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರವಿಂದ ಅರಳಿ ಅವರು, ಅಲ್ಲಿನೀರು ಇಲ್ಲವೇ ಇಲ್ಲ, ಕೆರೆ ಜಾಗ ಕಟ್ಟಡವಾಗಿ ಮಾರ್ಪಟ್ಟಿದೆ. ಅಲ್ಲಿ ನೀರು ಹೇಗೆ ಇರಲು ಸಾಧ್ಯ. ರಘುನಾಥರಾವ್‌ ಮಲ್ಕಾಪುರೆ ಅವರು ಅಲ್ಲಿಯವರೆ ಅವರನ್ನೇ ಕೇಳಿ ಎಂದರು.

ಅದಕ್ಕೆ ಮಲ್ಕಾಪುರೆ ಅವರು ಅಲ್ಲಿ ಯಾವ ನೀರು, ಕೆರೆಗೆ ನೀರು ಹರಿದು ಬರುವ ಮೂಲವೂ ಇಲ್ಲವಾಗಿದ್ದು, ಅಲ್ಲಿ ಕಟ್ಟಡ್ಡಗಳಿವೆ ಎಂದರು. ತಕ್ಷಣಕ್ಕೆ ಸರ್ವೆಗೆ ಸೂಚಿಸುತ್ತೇನೆ, ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next