ಬೆಂಗಳೂರು: “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಇಂದು ಮತ್ತು ನಾಳೆ(ನ.26, 27) ಚಿಕ್ಕಬಳ್ಳಾಪುರ ಜಿಲ್ಲೆಯ ಜರಬಂಡಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದು, ಇದು ಸಚಿವರ 12ನೇ ಗ್ರಾಮ ವಾಸ್ತವ್ಯವಾಗಿದೆ.
ಶನಿವಾರ ಆಯೋಜಿಸಲಾದ ಕಾರ್ಯಕ್ರಮವನ್ನು ಆದಿಚುಂಚನಗಿರಿ ಪೀಠಾಧಿಪತಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದು, ಸಚಿವರು ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಜನರಿಗೆ ಉನ್ನತ ಅಧಿಕಾರಿಗಳು ಸಹ ಸುಲಭವಾಗಿ ಸಿಗಬೇಕು, ಜನರ ಸಮಸ್ಯೆ ಬಗ್ಗೆ ಅವರಿಗೂ ಮನವರಿಕೆ ಆಗಬೇಕು. ಆಗ ಮಾತ್ರ ಶೀಘ್ರ ಪರಿಹಾರ ದೊರೆಯಲು ಸಾಧ್ಯ. ಆದ್ದರಿಂದ ಸಚಿವರೇ ಮನೆ ಬಾಗಿಲಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು ಜನಸ್ಪಂದನ, ಹನಮಂತಪುರ ಗ್ರಾಮದಲ್ಲಿ ಗ್ರಾಮ ಸಭೆ, ಕುಂದು ಕೊರತೆಗಳ ಪರಿಶೀಲನೆ ಹಾಗೂ ಸ್ಥಳೀಯರ ಜತೆ ಮಾತುಕತೆ ನಡೆಸಲಿದ್ದಾರೆ. ತದನಂತರ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡಿ, ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ನ.27ರಂದು ಪೌತಿ ಖಾತೆ ಅಭಿಯಾನ ನಡೆಯಲಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಸಹ ಹಳ್ಳಿಗಳಿಗೆ ತೆರಳಿ, 24 ಗಂಟೆಗಳ ಕಾಲ ಹಳ್ಳಿಯಲ್ಲಿಯೇ ಇದ್ದು ಎಲ್ಲ ಅರ್ಜಿಗಳನ್ನು ಕಡ್ಡಾಯವಾಗಿ ಅಲ್ಲಿಯೇ ವಿಲೇವಾರಿ ಮಾಡುವುದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ವಿಶೇಷತೆ. ಈ ಗ್ರಾಮ ವಾಸ್ತವ್ಯದಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಯಿಂದ ಸೌಲಭ್ಯ ವಿತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಚಿವ ಡಾ.ಸುಧಾಕರ್ ಮತ್ತು ಮುಖಂಡರು ಹಾಗೂ ಜಿಲ್ಲಾಧಿಕಾರಿಗಳು ಸೇರಿ ಅಧಿಕಾರ ವರ್ಗದವರು ಭಾಗವಹಿಸಲಿದ್ದಾರೆ.