ಕಲಬುರಗಿ: ವೃದ್ಧಾಪ್ಯ ಮಾಶಾಸನಕ್ಕಾಗಿ ಇನ್ಮು ಮುಂದೆ ಕೈಯಲ್ಲಿ ಅರ್ಜಿ ಹಿಡಿದು ತಹಶೀಲ್ದಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ನಗರದ ನೂತನ ಮಹಾವಿದ್ಯಾಲಯದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಬೃಹತ್ ಉದ್ಯೋಗ ಮೇಳ ಉದ್ದೇಶಿಸಿ ಮಾತನಾಡಿದರು.
ಆಧಾರ ಕಾರ್ಡ್ ನಲ್ಲಿ 60 ವರ್ಷ ವಯಸ್ಸಾಗುತ್ತಿದ್ದಂತೆ ಅರ್ಜಿಯನ್ನೇ ಅವರ ಮನೆಗೆ ಕಳುಹಿಸಿ ತಹಶೀಲ್ದಾರ್ ಕಚೇರಿಗೆ ತರಿಸಿಕೊಂಡು ಫೋಟೋ ತೆಗೆಯಿಸಿ ವೃದ್ಧಾಪ್ಯ ಮಾಸಾಶನ ಮಂಜೂರಾತಿ ನೀಡಲಾಗುವುದು. ಬಹು ಮುಖ್ಯವಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು ಸಚಿವರು ಸ್ಪಷ್ಟಪಡಿಸಿದರು.
ವೃದ್ಧಾಪ್ಯ ಮಾಸಾಶನದ ಮಂಜೂರಾತಿಯ ಅರ್ಜಿಯನ್ನು ಮನೆಗೆ ತಲುಪಿಸುವ ಯೋಜನೆ ಮಾಸಾಂತ್ಯದೊಳಗೆ ಕಾರ್ಯಾರಂಭ ಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ ಹಾಗೂ ತಹಶೀಲ್ದಾರರರು ಪ್ರತಿ ತಿಂಗಳು ಗ್ರಾಮ ಪಂಚಾಯಿತಿಯಲ್ಲಿ ಒಂದು ದಿನವೀಡಿ ವಾಸ್ತವ್ಯ ಹೂಡಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆಡಳಿತ ಗ್ರಾಮೀಣ ಭಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ರಾಜುಗೌಡ, ಬಿ.ಜಿ. ಪಾಟೀಲ್, ಎಂ.ಸಿ. ಮನಗೂಳಿ, ನಾಡಿನ ವಿವಿಧ ಮಠಾಧೀಶರು ಹಾಜರಿದ್ದರು.