Advertisement

ಮನೆ ಕಳೆದುಕೊಂಡ ವೃದ್ದೆಗೆ 90 ಸಾವಿರ ರೂ ಚೆಕ್ ನೀಡಿದ ಸಚಿವ ಆರ್ ಆಶೋಕ್‌

09:52 PM Aug 04, 2022 | Team Udayavani |

ಕುಣಿಗಲ್: ಮಳೆಯ ಹಾನಿಯಿಂದ ರಾಜ್ಯದಲ್ಲಿ ಇದುವರೆಗೂ 15 ಸಾವಿರ ಮನೆಗಳು ಹಾನಿಗೆ ಒಳಗಾಗಿದ್ದು ಮನೆ ಹಾಗೂ ಪ್ರಾಣ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ ಎಂಟು ನೂರು ಕೋಟಿ ಹಣವಿದ್ದು, ಇದಲ್ಲದೇ ಹೆಚ್ಚುವರಿಯಾಗಿ 500 ಕೋಟಿ ರೂಗಳನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

Advertisement

ಗುರುವಾರ ತಾಲೂಕಿನ ಎಡಿಯೂರು ಹೋಬಳಿ ನಾಗೇಗೌಡನಪಾಳ್ಯ ಗ್ರಾಮಕ್ಕೆ ಬೇಟಿ ನೀಡಿದ ಸಚಿವರು ಮಳೆಯಿಂದ ಮನೆ ಕಳೆದುಕೊಂಡ ಗಂಗಮ್ಮ ಅವರಿಗೆ 90 ಸಾವಿರ ರೂ ಪರಿಹಾರ ಚೆಕ್  ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ  ಬಿಜೆಪಿ ಸರ್ಕಾರ ಬಡವರ, ದೀನ ದಲಿತರ ಪರವಾಗಿದೆ ಕೆಲಸ ಮಾಡುತ್ತಿದೆ. ಮಳೆ ಹಾನಿಯಿಂದ ನೊಂದವರ ಪರವಾಗಿ ನಿಂತಿದೆ. ಈಗಾಗಲೇ ಬೆಳೆ ಪರಿಹಾರಕ್ಕೆ ಎರಡು ಪಟ್ಟು ಹಣವನ್ನು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಈ ಹಿಂದೆಯೂ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲೂ ಸಹಾ ಎರಡು ಪಟ್ಟು ಹಣ ಘೋಷಣೆ ಮಾಡಿದರು. ಅದರಂತೆ ಜನರಿಗೆ ಹಂಚಿಕೆ ಮಾಡಲಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಮಳೆ ಹೆಚ್ಚಾಗಿದೆ. ಅಂತರ್ಜಲ ಮಟ್ಟ ವೃದ್ದಿಯಾಗಿದೆ. ಜತೆಗೆ ಜನರಿಗೆ  ಸ್ಪಲ್ಪ ತೊಂದರೆಯೂ ಆಗಿದೆ. ಬಡವರಿಗೆ ತೊಂದರೆಯಾಗಬಾರದೆಂದು ನಮ್ಮ ಸರ್ಕಾರ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪ್ರಕೃತಿ ವಿಕೋಪದಿಂದ ಪ್ರಾಣ ಕಳೆದುಕೊಂಡವರಿಗೆ, ಪರಿಪೂರ್ಣ ಮನೆ ಕಳೆದುಕೊಂಡವರಿಗೆ ತಲಾ ಐದು ಲಕ್ಷ ರೂಗಳನ್ನು ಪರಿಹಾರವಾಗಿ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಡಿಕೆಶಿ ಯಾರ ಕೈ ಹಿಡಿದು ಮೇಲೆತ್ತುವರೋ ಅವರು ಬೀದಿಗೆ:  ಸಚಿವ ಆರ್‌.ಅಶೋಕ್‌ ಲೇವಡಿ

ಹುಟ್ಟು ಹಬ್ಬ ಆಚರಣೆಯಲ್ಲಿ ವಿಪಕ್ಷ ನಾಯಕರು: ವಿರೋಧ ಪಕ್ಷಗಳು ನಮ್ಮ ಸರ್ಕಾರದ ಬಗ್ಗೆ ಏನೇ ಟೀಕೆ ಟಿಪ್ಪಣಿ ಮಾಡಲಿ, ಅದನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಅವರೆಲ್ಲರೂ ಹುಟ್ಟು ಹಬ್ಬದ ಆಚರಣೆಯಲ್ಲಿ ಇದ್ದಾರೆ. ನಾವು ಅನಾಹುತ ನಡೆದ ಕಡೆ ಸುತ್ತುತ್ತಿದ್ದೇವೆ ಎಂದು ಸಿದ್ದರಾಮೋತ್ಸವ  ಆಚರಣೆ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

ಹಣಕ್ಕೆ ಕೊರತೆ ಇಲ್ಲ: ರಾಜ್ಯದಲ್ಲಿ ಎಲ್ಲೇ ಹಾನಿ ಉಂಟಾದರೂ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲು ಈಗಾಗಲೇ ಸೂಚಿಸಿದ್ದೇನೆ, ಯಾರು ಸಹಾ ರಜೆ ತೆಗೆದುಕೊಳ್ಳಬಾರದು ಬಡವರ ಪರವಾಗಿ, ಕಷ್ಟದಲ್ಲಿ ಇರುವ ಜನರೊಂದಿಗೆ ನಿಂತು, ಸಂಕಷ್ಟ ಸಮಯದಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದೇನೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಹಾಗಾಗಿ ಎಷ್ಟೇ ಹಣ ಬೇಕಾದರೂ ನಾವು ಕೊಡಲು ಸಿದ್ದರಿದ್ದೇವೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿಗೂ ಹೆಚ್ಚು ಹಣ ಇದೆ. ನಾಳೆ ಮತ್ತೆ 500 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಕಳಿಸಿಕೊಡುತ್ತೇನೆ. ತ್ವರಿತವಾಗಿ ಬಡವರಿಗೆ ಸೌಲಭ್ಯಗಳು ಸಿಗಬೇಕು. ಆ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಇದುವರೆಗೂ 15 ಸಾವಿರ ಮನೆಗಳಿಗೆ ಹಾನಿಯಾಗಿವೆ. ಈ ಪೈಕಿ ಎರಡು ಸಾವಿರ ಮನೆಗಳು ಭಾಗಶಃ ಹಾನಿಯಾದರೆ, 900 ಮನೆ  ಪೂರ್ಣ ಪ್ರಮಾಣದಲ್ಲಿ ಹಾನಿಗೆ ಒಳಗಾಗಿವೆ. ಮಳೆ ನಿಂತ ಮೇಲೆ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಹೇಳಿದರು.

ಸದ್ಬಳಕ್ಕೆಗೆ ಸೂಚನೆ: ಮನೆ ಯಾವಾಗ ಬಿತ್ತು, ಮನೆಯಲ್ಲಿ ಯಾರ ಯಾರು ಇದ್ದೀರ ಏನು ತೊಂದರೆಯಾಗಲಿಲ್ಲವೇ ಎಂದು ಸಂತ್ರಸ್ತ ಮಹಿಳೆ ಗಂಗಮ್ಮ ಅವರನ್ನು ಸಚಿವರು ಕೇಳಿದರು. ಸ್ವಾಮಿ ನನ್ನ ಮಗ ಹಾಗೂ ಸೋಸೆ, ಮೊಮ್ಮಕ್ಕಳು ಎಲ್ಲಾ ಬೆಂಗಳೂರಿನಲ್ಲಿ ಇದ್ದಾರೆ. ನಾನೋಬ್ಬಳೇ ನನ್ನ ಮನೆಯಲ್ಲಿ ಇದ್ದೇನೆ. ಮೊನ್ನೆ ಮುಂಜಾನೆ ಇದ್ದಕ್ಕಿದಂತೆ ದೊಡ್ಡ ಪ್ರಮಾಣದ ಶಬ್ದವಾಯಿತು. ಎದ್ದು ನೋಡುತ್ತಿದಂತೆ ಮನೆಯ ಗೋಡೆ ಬಿದ್ದಿತು. ತಕ್ಷಣ ಎಚ್ಚರಗೊಂಡು ಹೊರಗೆ ಹೋಡಿ ಬಂದೆ ಪ್ರಾಣಕ್ಕೆ ಯಾವುದೇ ತೊಂದರೆಯಾಗಲಿಲ್ಲ ಸ್ವಾಮಿ ಎಂದು ವೃದ್ದ ಮಹಿಳೆ ಹೇಳಿದರು. ತಾತ್ಕಾಲಿಕ 90 ಸಾವಿರ ರೂ ಚೆಕ್ ನೀಡಲಾಗಿದೆ ಇನ್ನು ನಾಲ್ಕು ಲಕ್ಷ ರೂ ಕೋಡಲಾಗುವುದು. ಈ ಹಣವನ್ನು ಮನೆಯ ದುರಸ್ಥಿಗೆ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಣ ದುರುಪಯೋಗ ಮಾಡಿಕೊಳ್ಳಬಾರದೆಂದು ಸಂತ್ರಸ್ತ ಮಹಿಳೆಗೆ ಸಚಿವರು ತಿಳಿಸಿದರು.

ಈ ವೇಳೆ ಅಬಕಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಉಪ ವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಬಲೇಶ್ವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next