ವಿಧಾನಸಭೆ: ಕಂದಾಯ ಸಚಿವ ಅಶೋಕ್ ಅವರು ಮಾತನಾಡುವಾಗ ಬಳಸುವ ಭಾಷೆ ಬಗ್ಗೆ ಗುರುವಾರ ಕೆಲಹೊತ್ತು ಸ್ವಾರಸ್ಯಕರ ಚರ್ಚೆ ನಡೆಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಅನಿಲ್ ಚಿಕ್ಕಮಾದು ಅವರು ಎಚ್‌ಡಿ ಕೋಟೆಯಲ್ಲಿರುವ ಕಾಕನಕೋಟೆ ಸಫಾರಿ ಕೇಂದ್ರ ಪ್ರವಾಸಿ ಕೇಂದ್ರ ಎಂದು ಘೋಷಿಸಲು ಒತ್ತಾಯಿಸಿದಾಗ ಸಚಿವ ಅಶೋಕ್ ಅವರ “ಮಾಡುತ್ತೀರಿ’ ಎಂಬ ಮಾತು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, “ನಾವು ಮಾಡುತ್ತೇವೆ ಎಂದು ಹೇಳಪ್ಪಾ, ಮಾಡುತ್ತೀರಿ, ಮಾಡುತ್ತೀರಿ ಎಂದು ಹೇಳಿದರೆ ನಾವು ಮಾಡಿದಂತಾಗುತ್ತದೆ’ ಎಂದರು. ಅದಕ್ಕೆ ಅಶೋಕ್ ಅವರು, ಬೆಂಗಳೂರು ಭಾಷೆ ಬೇರೆ, ಮೈಸೂರು ಭಾಷೆ ಬೇರೆ ಸರ್ ಎಂದರು. ಅದಕ್ಕೆ ಒಪ್ಪದ ಸಿದ್ದರಾಮಯ್ಯ ಮೈಸೂರು ಪ್ರಾಂತ್ಯದ ಭಾಷೆಯಲ್ಲಿ ವ್ಯತ್ಯಾಸವೇ ಇಲ್ಲ ಎಂದು ಹೇಳಿದರು.
ಸಚಿವ ಮಾಧುಸ್ವಾಮಿ ಸಹ, ಮಾಡುತ್ತೇವೆ ಎಂದು ಹೇಳಿ, ಸರಿ ಮಾಡಿಕೊಳ್ಳಿ ಎಂದರು. ಜೆಡಿಎಸ್‌ನ ಅನ್ನದಾನಿ, ಕನ್ನಡದಲ್ಲಿ ಹಲವಾರು ಉಪ ಭಾಷೆಗಳಿವೆ, ಅಶೋಕಣ್ಣದು ಒಂದು ಉಪ ಭಾಷೆ. ಅವರು ಹಾಗೇ ಮಾತನಾಡಲಿ ಬಿಡಿ, ಮಂಡ್ಯ, ಬೆಂಗಳೂರು, ಚಾಮರಾಜನಗರ, ಮಳವಳ್ಳಿ ಕಡೆ ಮಾತು ಬೇರೆ ಬೇರೆ ರೀತಿಯಲ್ಲೇ ಇರುತ್ತದೆ. ಆದರೆ, ಕನ್ನಡವೇ ಎಂದು ಹೇಳಿದರು.