ಕಲಬುರಗಿ: ನೇರ ನೇಮಕಾತಿಯಲ್ಲಿ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಪುನಃ ಸೇವೆಯಲ್ಲಿ ಮುಂದುವರಿಸಬೇಕು ಹಾಗೂ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಿದರು.
ಹೊರಗುತ್ತಿಗೆ ನೌಕರರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಅನಿರ್ದಿಷ್ಟ ಸತ್ಯಾಗ್ರಹ
ಆರಂಭಿಸಿದ್ದರೂ ಈ ವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಹಾಗೂ ಜಿಲ್ಲಾ ಉಸ್ತುವಾರಿ -ಸಮಾಜ ಕಲ್ಯಾಣ ಸಚಿವರು ನೀಡಿದ ಭರವಸೆ ಸುಳ್ಳಾದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದರು.
ಸಚಿವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಸಮಾಜ ಕಲ್ಯಾಣ ಇಲಾಖೆಯಲ್ಲಿ ನೇರ ನೇಮಕಾತಿಯಿಂದ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ತಾತ್ಕಾಲಿಕವಾಗಿ ಆರು ತಿಂಗಳ ವರೆಗೆ ಮುಂದುವರಿಸುವುದಾಗಿ ಸರ್ಕಾರ ತಿಳಿಸಿತ್ತು. ಅದೇ ರೀತಿ ರಾಜ್ಯವ್ಯಾಪ್ತಿಯಲ್ಲಿರುವ 5000 ಹೊರಗುತ್ತಿಗೆ ನೌಕರರನ್ನು ಸೇವೆಯಲ್ಲಿ ಮುಂದುವರಿಸಿದೆ. ಬಿಸಿಎಂ ಇಲಾಖೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸೇವೆಯಲ್ಲಿ ಮುಂದುವರೆಸಿದ್ದಾರೆ. ಆದರೆ ಸಮಾಜಕಲ್ಯಾಣ ಇಲಾಖೆಯಲ್ಲಿ ಇದು ಜಾರಿಯಾಗಿಲ್ಲ ಎಂದರು.
ಜಿಲ್ಲೆಯಲ್ಲಿ 27 ಜನ ನೌಕರರನ್ನು ಸೇವೆಯಲ್ಲಿ ಮುಂದುವರಿಸಲು ರಾಜ್ಯ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಿದಾಗ ಅವರು ನಾಳೆಯಿಂದಲೇ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದರೂ ಅಧಿಕಾರಿಗಳು ಸಚಿವರ ಆದೇಶ ಪಾಲಿಸುತ್ತಿಲ್ಲ. ಅಫಜಲಪುರ ತಾಲೂಕಿನಲ್ಲಿ ಸಚಿವರ ಆದೇಶದಂತೆ ಕೆಲವರು ಸೇವೆಯಲ್ಲಿ ಮುಂದುವರಿದರೂ ವೇತನ ಪಾವತಿಯಾಗಿಲ್ಲ ಎಂದರು.
ಸಚಿವರು ಕೂಡಲೇ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಕೆಲಸದಲ್ಲಿ ಮುಂದುವರಿಸಬೇಕು ಹಾಗೂ ಬಾಕಿ ವೇತನ ಪಾವತಿ ಮಾಡಬೇಕೆಂದು ಒತ್ತಾಯಿಸಿದರು. 50 ವಿದ್ಯಾರ್ಥಿಗಳಿರುವ ವಸತಿ ನಿಲಯಕ್ಕೆ ಮೂವರನ್ನು ನೇಮಕ ಮಾಡಲಾಗಿದೆ.
ನಿಗದಿಪಡಿಸಿದ ಎಸ್‌ಎಸ್‌ಎಲ್‌ಸಿಗಿಂತಲೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರು ನೇಮಕವಾಗಿದ್ದಾರೆ. ರೊಟ್ಟಿ ಮಾಡಲು ಒಬ್ಬರು, ಅನ್ನ ಸಾಂಬಾರಿಗೊಬ್ಬರು ಹಾಗೂ ಸ್ವತ್ಛತೆಗೊಬ್ಬರಂತೆ ಮೂರು ಹುದ್ದೆಗಳಲ್ಲಿ 50 ವಿದ್ಯಾರ್ಥಿಗಳಿಗೆ ಒಬ್ಬರೇ ರೊಟ್ಟಿ ಮಾಡುವುದು ಸಾಧ್ಯವಿಲ್ಲ. ಇನ್ನೊಬ್ಬರನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಠಾರೆ, ಸುರೇಶ ದೊಡ್ಮನಿ, ಸುಭಾಷ ಬೆಡಸೂರ, ಫಾತೀಮಾ ಫತ್ತೆಪಹಾಡ, ಪರಮೇಶ್ವರ ಹೈಬತ್ತಿ, ರೇಣುಕಾ ಸಂಗೋಳಗಿ, ಚಂದಪ್ಪ ಹಾವನೂರ, ಮಲ್ಲಮ್ಮ ಕೋಡ್ಲಿ ಹಾಗೂ ಇತರರು ಇದ್ದರು.