Advertisement

22ರ ನಂತರ ಸ್ಥಿತಿ ನೋಡಿ ಲಾಕ್‌ಡೌನ್ : ಸಚಿವ ಪ್ರಹ್ಲಾದ ಜೋಶಿ

01:24 PM May 18, 2021 | Team Udayavani |

ಹುಬ್ಬಳ್ಳಿ:ಸರಕಾರ ಮೇ 22ರ ನಂತರ ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂಬುದು ನನ್ನ ಸಲಹೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಇಲ್ಲಿನ ಕಿಮ್ಸ್‌ ಆಸ್ಪತ್ರೆಗೆ ಜೈನ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಆರ್ಗನೈಜೇಶನ್‌ (ಜಿತೋ)ವತಿಯಿಂದ ಸೋಮವಾರ ಕೊಡಮಾಡಲಾದ ಆಕ್ಸಿಜನ್‌ ಆನ್‌ ವ್ಹೀಲ್ಸ್‌ ವಾಹನವನ್ನು ಕಿಮ್ಸ್‌ ನಿರ್ದೇಶಕರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಲಾಕ್‌ಡೌನ್‌ ಇನ್ನಷ್ಟು ದಿನ ಮುಂದುವರಿಸಬೇಕೆಂದು ತಜ್ಞರು ನೀಡಿದ ವರದಿ ನಾನು ನೋಡಿಲ್ಲ. ಸದ್ಯ ಮೇ 24ರವರೆಗೆ ಕಠಿಣ ಲಾಕ್‌ಡೌನ್‌ ಜಾರಿಯಲ್ಲಿದೆ. ಮೇ 20-22ರವರೆಗೆ ಪರಿಸ್ಥಿತಿ ನೋಡಿಕೊಂಡು, ಆಕಸ್ಮಾತ್‌ ಸೋಂಕಿತರ ಸಂಖ್ಯೆ ಕಡಿಮೆಯಾಗದಿದ್ದರೆ ಆಗ ಲಾಕ್‌ಡೌನ್‌ ಮುಂದುವರಿಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಲಾಕ್‌ಡೌನ್‌ ಪರಿಣಾಮದಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲು ಸಮಯ ಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ. 15 ದಿನಗಳಿಗೆ ಆಗುವಷ್ಟು ದಿನಸಿ ಖರೀದಿಸಿ, ಮನೆಯಲ್ಲೇ ಇರಿ. ಪದೇ ಪದೇ ಹೊರಗಡೆ ತೆರಳಬೇಡಿ ಎಂದು ಮನವಿ ಮಾಡಿದರು.

ಆಕ್ಸಿಜನ್‌ ಕೊರತೆಯಿಲ್ಲ: ಕಿಮ್ಸ್‌ಗೆ 25 ಬಿಎಲ್‌ ವೆಂಟಿಲೇಟರ್‌ ಹೊಸದಾಗಿ ಆಗಮಿಸಿವೆ. ಜಿಲ್ಲೆಯಲ್ಲಿ 8-10 ದಿನಗಳಿಗೆ ಆಗುವಷ್ಟು ಆಕ್ಸಿಜನ್‌ ಇದೆ. ಜಿಲ್ಲೆಗೆ ಅವಶ್ಯಕತೆ ಇರುವಷ್ಟು ಆಕ್ಸಿಜನ್‌ ಬೆಡ್‌ಗಳ ಪ್ರಮಾಣ ಹೆಚ್ಚಿಸ ಲಾಗುವುದು. ಕುವೈತ್‌ನಿಂದ ಆಗಮಿಸಿದ 50 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅನ್ನು ವಿವಿಧ ಜಿಲ್ಲೆಗೆ ಹಂಚಲಾಗುವುದು. ಸಾರ್ವಜನಿಕರು ಕೋವಿಡ್‌ ಆಗಮಿಸಿದ ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಿರಿ. ಆರಂಭದಲ್ಲಿ ಚಿಕಿತ್ಸೆ ಪಡೆದವರಿಗೆ ಕೋವಿಡ್‌ ನಿಂದ ಹೆಚ್ಚಿನ ತೊಂದರೆಯಾಗಿಲ್ಲ ಎಂದರು.

ತುರ್ತು ಚಿಕಿತ್ಸೆಗೆ ಆಕ್ಸಿಜನ್‌ ಆನ್‌ ವ್ಹೀಲ್‌: ಜಿತೋ ವತಿಯಿಂದ ಸೂಲ್ಕ್ ವಾಹನವನ್ನು ತುರ್ತು ಸಂದರ್ಭದ ಚಿಕಿತ್ಸೆಗಾಗಿ ಮಾರ್ಪಡಿಸಲಾಗಿದೆ. ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳು ಕಿಮ್ಸ್‌ನಲ್ಲಿ ಬೆಡ್‌ ಸಿಗುವವರೆಗೆ ವಾಹನದಲ್ಲಿದ್ದು ಚಿಕಿತ್ಸೆ ಪಡೆಯಬಹದು. ಒಟ್ಟು 6 ಜನರಿಗೆ ಆಕ್ಸಿಜನ್‌ ಸಹಿತ ಇತರೆ ಸೌಕರ್ಯಗಳ ವ್ಯವಸ್ಥೆ ಈ ವಾಹನದಲ್ಲಿ ಕಲ್ಪಿಸಲಾಗಿದೆ. 72ಸಾವಿರ ವೆಚ್ಚದ 9 ಲೀಟರ್‌ ಸಾಮರ್ಥಯದ 6 ಆಕ್ಸಿಜನ್‌ ಕಾನ್ಸಂಟ್ರೇಟರ್ಸ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ದೇಶದಲ್ಲಿ ಆಕ್ಸಿಜನ್‌ ಕಾನ್ಸಂಟ್ರೇಟರ್ಸ್‌ಗಳ ಕೊರತೆ ಇರುವುದರಿಂದ ದುಬೈನಿಂದ ಆಮದು ಮಾಡಿಕೊಂಡು ವಾಹನ ಸಿದ್ಧಪಡಿಸಲಾಗಿದೆ. ಚೆನ್ನೈನಲ್ಲಿ ಈ ಮಾದರಿಯ 20 ವಾಹನಗಳನ್ನು ಸಿದ್ಧಪಡಿಸಿ ಸರಕಾರಕ್ಕೆ ನೀಡಲಾಗಿದೆ. ಮುಂದಿನ ದಿನದಲ್ಲಿ ಧಾರವಾಡ ಜಿಲ್ಲಾಸ್ಪತ್ರೆಗೂ ಆಕ್ಸಿಜನ್‌ ಆನ್‌ ವ್ಹೀಲ್‌ ವಾಹನ ನೀಡುವುದಾಗಿ ಜಿತೋ ಸಂಘಟನೆ ಹುಬ್ಬಳ್ಳಿ ಅಧ್ಯಕ್ಷ ಶಾಂತಿಲಾಲ ಓಸವಾಲ ಹೇಳಿದರು.

Advertisement

ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಕಿಮ್ಸ್‌ನ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾನಿ, ಪ್ರಾಂಶುಪಾಲ ಡಾ| ಈಶ್ವರ ಹೊಸಮನಿ, ಎಸ್‌.ಎಸ್‌. ಶೆಟ್ಟರ ಫೌಂಡೇಶನ್‌ದ ಸಂಕಲ್ಪ ಶೆಟ್ಟರ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಆರ್‌ಎಸ್‌ಎಸ್‌ನ ಪ್ರಮುಖ ಶ್ರೀಧರ ನಾಡಗೇರ, ಜಿತೋದ ರಾಕೇಶ ಕಠಾರಿಯಾ, ಗೌತಮ ಓಸವಾಲ, ಕಿಷನ್‌ ಕಠಾರಿಯಾ, ವಿನೋದ ಪಠವಾ, ಚಿರಾಗ ಭಂಡಾರಿ, ವೈಭವ ಜೈನ, ರಿಷಬ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next