ಹುಬ್ಬಳ್ಳಿ: ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಬೆಡ್ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ತಾಯಿ ಮತ್ತು ಮಗು ಆರೈಕೆ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ 10 ದಿನದೊಳಗೆ 300 ಹಾಸಿಗೆ ವ್ಯವಸ್ಥೆ ಮಾಡಿ ಎಂದು ಗುತ್ತಿಗೆದಾರರು ಹಾಗೂ ಅ ಧಿಕಾರಿಗಳಿಗೆ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಸೂಚಿಸಿದರು.
ಇಲ್ಲಿನ ಕಿಮ್ಸ್ ಆವರಣದಲ್ಲಿ ಕೇಂದ್ರದ ನ್ಯಾಷನಲ್ ಅರ್ಬನ್ ಹೆಲ್ತ್ ಮಿಷಿನ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೇಂದ್ರದ ತಾಯಿ ಮತ್ತು ಮಗು ಆರೈಕೆ ಕೇಂದ್ರ ಕಟ್ಟಡದ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಅವರು, 2017ರಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ನಾಲ್ಕು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ತರಾಟೆ ತೆಗೆದುಕೊಂಡರು.
ನಿರ್ಮಾಣಕ್ಕೆ ಸಾಕಷ್ಟು ತಾಂತ್ರಿಕ ತೊಡಕಗಳು ಉದ್ಭವಿಸಿದ್ದವು. ಕಳೆದ ಐದು ತಿಂಗಳ ಹಿಂದೆ ಅಂತಿಮ ವಿನ್ಯಾಸ ನೀಡಲಾಗಿದೆ ಎಂದು ಅ ಧಿಕಾರಿಗಳು ದಾಖಲೆ ತೋರಿಸಿದರು. ಸರಕಾರದ ಹಂತದಲ್ಲಿನ ವಿಳಂಬಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ನೆಲ ಮಹಡಿ ಹಾಗೂ ಮೊದಲ ಮಹಡಿ ಕೋವಿಡ್ ವಾರ್ಡಾಗಿ ಪರಿವರ್ತನೆಯಾಗಬೇಕು. ಇದರೊಂದಿಗೆ ಆಕ್ಸಿಜನ್ ಪೂರೈಕೆ ಆಗಬೇಕೆಂದು ಸೂಚನೆ ನೀಡಿದರು. ಇಂದು ರಾತ್ರಿಯೊಳಗೆ ಸಣ್ಣಪುಟ್ಟ ಕಾಮಗಾರಿ ಪೂರ್ಣಗೊಳಿಸಿ ಕೋವಿಡ್ ವಾರ್ಡ್‌ಗೆ ಬೇಕಾದ ಸೌಲಭ್ಯ ಕಲ್ಪಿಸಲಾಗುವುದು. ಇದರಲ್ಲಿ ಸುಮಾರು 235 ಬೆಡ್ ಹಾಕಬಹುದಾಗಿದೆ ಇದರೊಂದಿಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುವುದು. ಉಳಿದಂತೆ 75 ಬೆಡ್‌ಗೆ ಸಂಬಂಧಿ ಸಿದಂತೆ ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಗಿಸಿ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಕಾಮಗಾರಿ ಶಾಖೆಯ ಎಇ ಎಚ್. ಅರುಣಕುಮಾರ ಸಚಿವರಿಗೆ ಮಾಹಿತಿ ನೀಡಿದರು.
ಕಾಯ್ದಿರಿಸಲಾಗಿದೆ 2000 ಬೆಡ್: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಈಗಾಗಲೇ 2000 ಬೆಡ್ ಕಾಯ್ದಿರಿಸಲಾಗಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 425 ಆಕ್ಸಿಜನ್ ಸಹಿತ ಹಾಸಿಗೆ ದೊರೆಯಲಿವೆ. ಕಿಮ್ಸ್ ಆವರಣದ ಈ ಕಟ್ಟಡದಲ್ಲಿ 300 ಹಾಗೂ ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಗು ಆರೈಕೆ ಕೇಂದ್ರದಲ್ಲಿ 125 ಹಾಸಿಗೆ ದೊರೆಯಲಿವೆ. ಯಾವುದೇ ಕಾರಣಕ್ಕೂ ಕೋವಿಡ್ ಚಿಕಿತ್ಸೆಗೆ ಸಮಸ್ಯೆಯಾಗದಂತೆ ಗಮನ ಹರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಕೊರೊನಾ ವಾರಿಯರ್, 45-60 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಕೇಂದ್ರ ಸರಕಾರ ಉಚಿತವಾಗಿ ನೀಡಿದೆ. ಇದೀಗ 18-45 ವಯಸ್ಸಿನವರಿಗೆ ಲಸಿಕೆಗೆ ಕೇಂದ್ರ-ರಾಜ್ಯ ಸರಕಾರಗಳು ಪಾಲುದಾರಿಕೆಯನ್ನು ನೀಡಬೇಕಿದೆ. ಖಾಸಗಿ ಆಸ್ಪತ್ರೆಗಳು ಸರಕಾರದ ಆದೇಶದಂತೆ ಶೇ.50 ಹಾಸಿಗೆಯನ್ನು ಆಯುಷ್ಮಾನ್ ಯೋಜನೆಯಡಿ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯ ನಿರ್ವಹಿಸುತ್ತಿದೆ. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಶೇ.50 ಹಾಸಿಗೆ ಕೋವಿಡ್-19 ರೋಗಿಗಳಿಗೆ ಕಾಯ್ದಿರಿಸಬೇಕು ಎಂದರು. ಜಿಲ್ಲಾ ಧಿಕಾರಿ ನಿತೇಶ ಪಾಟೀಲ, ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಇನ್ನಿತರರಿದ್ದರು.