ಗದಗ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಶುಸಂಗೋಪನೆ ಹಾಗೂ ವಕ್ಫ್ ಇಲಾಖೆ ಸಚಿವ ಪ್ರಭು ಚವ್ಹಾಣ್, ಅಜಿತ್ ಪವಾರ್ ಗೆ ತಲೆನೇ ಇಲ್ಲ, ಅವನೊಬ್ಬ ಡಬಲ್ ಗೇಮ್ ವ್ಯಕ್ತಿ ಎಂದು ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜಾಗ ನಮ್ಮದು ಎನ್ನುವುದು ಅಜಿತ್ ಪವಾರ್ ಅವರ ದಡ್ಡತನದ ಪರಮಾವಧಿ. ರಾತ್ರೋರಾತ್ರಿ ನಾಯಕನಾದವನು ಕರ್ನಾಟಕದ ಗಡಿ ಬಗ್ಗೆ ಸಾಂಗ್ಲಿ, ಸೊಲ್ಲಾಪುರಕ್ಕೆ ಬಂದು ಮಾತನಾಡುತ್ತೇನೆ ಎನ್ನುತ್ತಿದ್ದಾರೆ. ಧೈರ್ಯವಿದ್ದರೆ ಕರ್ನಾಟಕಕ್ಕೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದರು.
ಪವಾರ್ ಅವರದ್ದು ಸದಾ ಬೆಂಕಿ ಹಚ್ಚುವ ಕೆಲಸ. ಅದೇ ಅವರ ಉದ್ಯೋಗವಾಗಿದೆ. ಕನ್ನಡ ನೆಲದ ಒಂದಿಂಚೂ ನೆಲವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸಂಪುಟದ ಸಂಕಟದ ಮಧ್ಯೆ ಬಿ.ಎಲ್.ಸಂತೋಷ್ ಭೇಟಿಯಾದ ರಮೇಶ್ ಜಾರಕಿಹೊಳಿ!
ಮುಖ್ಯಮಂತ್ರಿ ಬದಲಾವಣೆ ಅಲ್ಲ. ಈ ಅವಧಿಯಷ್ಟೇ ಅಲ್ಲ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಯಡಿಯೂರಪ್ಪ ಅವರೇ ಸಿಎಂ ಆಗುವರು ಎಂದು ಹೇಳಿದರು.
ಸಂಪುಟ ಪುನರ್ ರಚನೆಯೋ, ವಿಸ್ತರಣೆಯೋ ಎನ್ನುವುದು ಮುಖ್ಯಮಂತ್ರಿ, ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಪಕ್ಷದಿಂದ ಯಾವುದೇ ಸೂಚನೆ ನೀಡಿದರೆ, ಚಾಚೂ ತಪ್ಪದೇ ಪಾಲಿಸುತ್ತೇನೆ ಎಂದು ಹೇಳಿದರು