ಬೀದರ್: ಮಹಾತ್ಮ ಗಾಂಧೀಜಿಯವರು ಬಹುವಾಗಿ ಇಷ್ಟಪಡುತ್ತಿದ್ದ ಖಾದಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವ ಮೂಲಕ ಈ ಬಾರಿಯೂ ದೇಶ್ಯಾದ್ಯಂತ ಎಲ್ಲೆಡೆ ಶನಿವಾರ ಗಾಂಧೀಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಬೀದರ್ ಜಿಲ್ಲಾ ಪ್ರವಾಸದ ನಿಮಿತ್ತ ಬೆಳಗ್ಗೆ ಬೀದರ್ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು, ತಾವೇ ನಗರದ ಖಾದಿ ಭಂಡಾರಕ್ಕೆ ತೆರಳಿ ಖಾದಿ ಬಟ್ಟೆಗಳನ್ನು ಖರೀದಿ ಮಾಡುವ ಮೂಲಕ ಅರ್ಥಪೂರ್ಣ ಗಾಂಧೀಜಿ ಜಯಂತಿ ಆಚರಣೆಯ ಸಂದೇಶ ನೀಡಿದರು.
ನಗರದ ಸರ್ಕಾರಿ ಆಸ್ಪತ್ರೆಯ ಎದುರಿನ ಉದಗೀರ ರಸ್ತೆಯಲ್ಲಿರುವ ಖಾದಿ ಭಂಡಾರದಲ್ಲಿ ಸಚಿವರು, ತಮಗೆ ಇಷ್ಟವಾದ ಖಾದಿ ಬಟ್ಟೆಗಳನ್ನು ಖರೀದಿಸಿದರು. ಅಲ್ಲದೇ ತಮ್ಮ ಜೊತೆಗಿದ್ದ ಕಾರ್ಯಕರ್ತರು, ಅಭಿಮಾನಿಗಳಿಗೂ ಕೂಡ ತಲಾ ಒಂದು ಶರ್ಟ್ ಮತ್ತು ಕರವಸ್ತ್ರವನ್ನು ಖರೀದಿಸಿ ನೀಡಿದರು. ಈ ಮೂಲಕ ಸ್ವದೇಶಿ ವಸ್ತುಗಳನ್ನು ಪ್ರತಿಯೊಬ್ಬರು ಬಳಸಿರಿ ಎನ್ನುವ ಸಂದೇಶವನ್ನು ಸಚಿವರು ಜಿಲ್ಲೆಯ ಜನತೆಗೆ ನೀಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ಖಾದಿ ಮಳಿಗೆಯಲ್ಲಿ ಪತ್ನಿಗಾಗಿ ಸೀರೆ ಖರೀದಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪೂರೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ಇತರರು ಇದ್ದರು.