ಬೀದರ್: ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಲು ಸರ್ಕಾರ ಬದ್ದವಾಗಿದ್ದು, ಶೀಘ್ರದಲ್ಲಿ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕು ನಿಯಂತ್ರಣ ಬಳಿಕ ತಜ್ಞರ ತಂಡವನ್ನು ರಚಿಸಿ ಅಗತ್ಯ ಬಿದ್ದಲ್ಲಿ ಕಾಯ್ದೆ ಜಾರಿಯಲ್ಲಿರುವ ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಅಧ್ಯಯನ ನಡೆಸಲಾಗುವುದು. ಸಿಎಂ ಜತೆ ಚರ್ಚಿಸಿ ಬೇರೆ ರಾಜ್ಯಗಳಿಗಿಂತ ಕಾಯ್ದೆಯನ್ನು ಹೆಚ್ಚು ಬಲಪಡಿಸಲಾಗುವುದು ಎಂದು ತಿಳಿಸಿದರು.
ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮ ವಹಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ. ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ 44.63 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಮಾಂಸ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ರೈತರಿಗೆ ಪಶು ವೈದ್ಯ ಸೇವೆ ನಿಗದಿತ ಕಾಲ ಮಿತಿಯಲ್ಲಿ ಕೈಗೊಳ್ಳಲು ಪಶು ಸಂಗೋಪನಾ ಇಲಾಖೆಯಿಂದ ವಾರ್ ರೂಮ್ ಸ್ಥಾಪಿಸಲಾಗಿದೆ ಹಾಗೂ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ 16 ಅಂಬುಲೆನ್ಸ್‌ಗಳನ್ನು ಸದ್ಯದಲ್ಲೇ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಖರೀದಿಸಿರುವ ಸಲಕರಣೆ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಮಾಜಿ ಸಿಎಂ ಸಿದ್ಧರಾಮಯ್ಯ ಸುಳ್ಳು ದಾಖಲೆಗಳನ್ನು ನೀಡುವ ಮೂಲಕ ಜನರಿಗೆ ‘ದಿಶಾ ಭೂಲ್’ ಮಾಡುತ್ತಿದ್ದಾರೆ. ಸಣ್ಣ ಕಪ್ಪು ಚುಕ್ಕೆ ಇಲ್ಲದೇ ಸಿಎಂ ಯಡಿಯೂರಪ್ಪ ಸರ್ಕಾರ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್‌ಗೆ ಮಾಡಲು ಯಾವುದೇ ಕೆಲಸ ಇಲ್ಲದ ಕಾರಣ ಆರೋಪ ಮಾಡುವುದರಲ್ಲಿ ನಿರತವಾಗಿದೆ ಎಂದು ಸಚಿವ ಚವ್ಹಾಣ ಕಿಡಿಕಾರಿದರು.