ಯಾದಗಿರಿ: ಬೀದರ್‌ನಲ್ಲಿ ಒಂದೇ ದಿನ ಕೋವಿಡ್ 19 ಸೋಂಕಿತರ ಸಂಖ್ಯೆ ಸ್ಫೋಟವಾಗಿದ್ದನ್ನು ಮನಗಂಡು ಹಾಗೂ ಇದರ ಗಂಭೀರತೆ ಅರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಏಪ್ರಿಲ್ 14ರ ವರೆಗೆ ಜಿಲ್ಲೆಯಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ. ಚವ್ಹಾಣ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ಸಾರ್ವಜನಿಕರು ಸಕಾರಣಗಳಿಲ್ಲದೇ ಮನೆಯಿಂದ ಹೊರಬಂದರೆ ಸೂಕ್ತ ಕ್ರಮ ಕೈಗೊಳ್ಳಿ. ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಿ ಎಂದು ಜಿಲ್ಲಾಧಿ ಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ಹೊರಗಡೆಯಿಂದ ಬಂದವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ನಲ್ಲಿ ಇಡಬೇಕು. ಅಗತ್ಯ ವೈದ್ಯಕೀಯ ಪರಿಕರ ಖರೀದಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಮನೆಯಲ್ಲಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗಬಾರದು ಎಂದರು. ಕಲಬುರಗಿ ಸಂಸದ ಡಾ| ಉಮೇಶ ಜಿ. ಜಾಧವ ಮಾತನಾಡಿ, ಬೇಸಿಗೆ ಕಾಲ ಇರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗಬಾರದು. ಕೊರೊನಾ ತಡೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಸಮರ್ಪಕವಾಗಿ ನಿಭಾಯಿಸುವಂತೆ ಸೂಚಿಸಿದರು.
ಶಾಸಕರಾದ ನರಸಿಂಹ ನಾಯಕ, ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವೈಯಕ್ತಿಕ ರಕ್ಷಣಾ ಸಾಧನಾ (ಪಿಪಿಇ), ಮಾಸ್ಕ್ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳ ಕೊರತೆ ಇದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಜೀವಭಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಪರಿಣಾಮಕಾರಿಯಾಗಿ ಹರಡದಂತೆ ತಡೆಯಲು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿ, ವಿದೇಶಗಳಿಂದ ಬಂದ 71 ಜನರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಿದ್ದು, 11 ಜನ 28 ದಿನಗಳ ಅವಲೋಕನ ಪೂರೈಸಿದ್ದಾರೆ. ನಿಜಾಮುದ್ದೀನ್ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿದ ಐದು ಜನ ಮತ್ತು ಬೆಂಗಳೂರಿನಲ್ಲಿ ಸೋಂಕಿತ ವ್ಯಕ್ತಿಗೆಸಂಪರ್ಕದಲ್ಲಿದ್ದರು ಎನ್ನಲಾದ 19 ಜನರನ್ನು ಅರಕೇರಾ (ಕೆ) ವಸತಿ ಶಾಲೆಯ ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಐದು ಜ್ವರ ತಪಾಸಣಾ ಕೇಂದ್ರಗಳನ್ನು ತೆರೆದು ಇಲ್ಲಿವರೆಗೆ 14623 ಜನ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, 344 ಕಾರ್ಮಿಕರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಆರು ಆರ್‌ಆರ್‌ಟಿ ತಂಡಗಳ ಮೂಲಕ 3,640 ಜನರ ಸ್ಕ್ರೀನಿಂಗ್ ಮಾಡಲಾಗಿದೆ. ವೈದ್ಯಕೀಯ ಉಪಚಾರಕ್ಕಾಗಿ ವಿವಿಧೆಡೆ 850 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಕ್ಷಿಪ್ರ ಸಂಚಾರಿ ದಳ ಆರು, ಕಣ್ಗಾವಲು ತಂಡ ಸೇರಿದಂತೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಸಹಾಯಕ ಆಯುಕ್ತರ ನೇತƒತ್ವದಲ್ಲಿ ಇನ್‌ಸಿಡೆಂಟ್ ಕಮಾಂಡರ್ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲೆಯ ಮೇಲುಸ್ತುವಾರಿ ಹಾಗೂ ಎ.ಬಿ. ಇಬ್ರಾಹಿಂ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.