ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.26ರಂದು ಮುಜರಾಯಿ ದೇವಸ್ಥಾನಗಳಲ್ಲಿ ನಡೆಯಲಿರುವ ಗೋಪೂಜೆ ಕಾರ್ಯಕ್ರಮಗಳಲ್ಲಿ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಳ್ಳುವಂತೆ ಸಚಿವ ಪ್ರಭು ಚವ್ಹಾಣ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೋ ರಕ್ಷಣೆಯ ಮಹತ್ವದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ಗೋ ಮಾತೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಮೂಲಕ ನಾಡಿನಾದ್ಯಂತ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಗೋಪೂಜೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಂದು ಸಂಜೆ 5.30 ರಿಂದ 6.30 ರವರೆಗೆ ಗೋಧೂಳಿ ಲಗ್ನದಲ್ಲಿ ನಡೆಯುವ ಗೋಪೂಜೆ ಕಾರ್ಯಕ್ರಮ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಗೋವಿನ ಪೂಜೆ ನಮ್ಮ ಸಂಸ್ಕೃತಿ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಆ ಹಿನ್ನೆಲೆಯಲ್ಲಿ ಗೋವುಗಳ ಮಹತ್ವ ಹೇಳುವುದರ ಜತೆಗೆ ಅವುಗಳ ರಕ್ಷಣೆ ಕುರಿತ ಜನಜಾಗೃತಿ ಕೂಡ ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.ಗೋವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು ಆ ಹಿನ್ನೆಲೆಯಲ್ಲಿ ಜಾನುವಾರು ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.
ಗೋಶಾಲೆಗಳ ಸ್ಥಾಪನೆ ಮಾಡುವುದರ ಜತೆಗೆ ಗೋವುಗಳ ಆರೋಗ್ಯಕ್ಕಾಗಿ 290 ಆಂಬ್ಯುಲೆನ್ಸ್ ಕೂಡ ನೀಡಲಾಗಿದೆ. ಆರೋಗ್ಯ ಸೇವೆಗಾಗಿ 108 ಹೇಗಿದೆಯೋ ಅದೇ ಮಾದರಿಯಲ್ಲಿ ಗೋಮಾತೆ ಸೇವೆಗಾಗಿ 1962 ಸಹಾಯವಾಣಿ ಪ್ರಾರಂಭಿಸಲಾಗಿದೆ. ಗೋ ಸೇವೆಯನ್ನು ಮಾನವೀಯ ಸೇವೆ ಎಂದೇ ಸರ್ಕಾರ ಭಾವಿಸಿದೆ ಎಂದು ತಿಳಿಸಿದ್ದಾರೆ.