Advertisement

ಚರ್ಮಗಂಟು ರೋಗ: 30 ಸಾವಿರ ರಾಸು ಸಾವು: ಸಚಿವ ಪ್ರಭು ಚೌಹಾಣ್‌

12:29 AM Feb 23, 2023 | Team Udayavani |

ಬೆಂಗಳೂರು: ಚರ್ಮಗಂಟು ರೋಗದಿಂದ ರಾಜ್ಯದಲ್ಲಿ 30 ಸಾವಿರ ಜಾನುವಾರುಗಳ ಸಾವನ್ನಪ್ಪಿವೆ ಎಂದು ಪಶು ಸಂಗೋಪನ ಸಚಿವ ಪ್ರಭು ಚೌಹಾಣ್‌ ಅವರು ಹೇಳಿದರು.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ 3.25 ಲಕ್ಷ ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿದ್ದು, ಈ ಪೈಕಿ 30,297 ಜಾನುವಾರುಗಳು ಸಾವನ್ನಪ್ಪಿವೆ. ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲೀಕರಿಗೆ ಇದುವರೆಗೂ 37 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನು 12 ಕೋಟಿ ರೂ.ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.

ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲಕರಿಗೆ ಪರಿಹಾರ ಧನವನ್ನು ಪ್ರತೀ ಕರುವಿಗೆ 5 ಸಾವಿರ, ಪ್ರತೀ ಹಸುವಿಗೆ 20 ಸಾವಿರ ಮತ್ತು ಪ್ರತೀ ಎತ್ತಿಗೆ 30 ಸಾವಿರದಂತೆ ಘೋಷಿಸಲಾಗಿದೆ.

ಈ ಸಂಬಂಧ ಪರಿಹಾರ ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಮೃತಪಟ್ಟ 30,297 ಜಾನುವಾರಗಳ ಪೈಕಿ 17,564 ಜಾನುವಾರುಗಳಿಗೆ ಪರಿಹಾರ ನೀಡಲಾಗಿದೆ. 2.57 ಲಕ್ಷ ಜಾನುವಾರುಗಳು ಗುಣಮುಖವಾಗಿವೆ. ಈವರೆಗೆ 1 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದರು.

ದನದ ಮಾಂಸ ರಫ್ತಾಗುತ್ತಿದ್ದರೆ ಕಠಿನ ಕ್ರಮ
ಬೆಂಗಳೂರು: ರಾಜ್ಯದಿಂದ ಗೋವಾಕ್ಕೆ ದನದ ಮಾಂಸ ರಫ್ತಾಗುತ್ತಿದ್ದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನ ಸಚಿವ ಪ್ರಭು ಚೌಹಾಣ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ಪ್ರಶ್ನೆಗೆ ಉತ್ತರಿಸಿ, ಕರ್ನಾಟಕದಿಂದ ಗೋವಾಕ್ಕೆ ದನದ ಮಾಂಸ ರಫ್ತು ಆಗುತ್ತಿಲ್ಲ ಎಂದು ಸಚಿವರು ಹೇಳಿದರು. ಅದಕ್ಕೆ ಗೋವಾಕ್ಕೆ ಪ್ರತೀದಿನ 2 ಟನ್‌ ದನದ ಮಾಂಸ ಬರುತ್ತಿದೆ ಎಂದು ಗೋವಾ ಸರಕಾರ ಹೇಳಿದೆ. ಹಾಗಾದರೆ, ಆ ಮಾಂಸ ಎಲ್ಲಿಂದ ಬರುತ್ತಿದೆ ಎಂದು ಹರೀಶ್‌ಕುಮಾರ್‌ ಮರು ಪ್ರಶ್ನೆ ಮಾಡಿದರು.

ನಮ್ಮ ರಾಜ್ಯದಿಂದ ಗೋವಾಕ್ಕೆ ದನದ ಮಾಂಸ ಹೋಗುತ್ತಿದ್ದರೆ ಕಠಿನ ಕ್ರಮ ಕೈಗೊಳ್ಳಲಾಗುವುದು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ 1,329 ಪ್ರಕರಣಗಳನ್ನು ದಾಖಲಿಸಿದ್ದು, 10 ಸಾವಿರ ಹಸುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next