ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ಶಾಸಕರನ್ನು ಕಡೆಗಣಿಸಿ ಪಕ್ಷ ವಿರೋಧಿಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮುಳಬಾಗಿಲು ಕ್ಷೇತ್ರದ ಶಾಸಕ ನಾಗೇಶ್‌ಗೆ ಮಂತ್ರಿ ಸ್ಥಾನ ನೀಡಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಚಿಂತಾಮಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರವನ್ನು ಉಳಿಸಿಕೊಳ್ಳಲು ಪಕ್ಷೇತರರಿಗೆ ಸಚಿವ ಸ್ಥಾನ ನೀಡುವುದು ಅನಿರ್ವಾಯವಾದರೂ ಪಕ್ಷ ವಿರೋಧಿಗಳಿಗೆ ಸಚಿವ ಸ್ಥಾನ ಕಲ್ಪಿಸಿರುವುದು ಬೇಸರದ ಸಂಗತಿ. ರಾಜ್ಯದಲ್ಲಿ ಗೌರವಯುತ ಸರ್ಕಾರ ನಡೆಸಲು ಹಿರಿಯ ಶಾಸಕರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಬೇಕಿತ್ತು.
ಸಂಪುಟ ವಿಸ್ತರಣೆಯಲ್ಲಿ ನಿಷ್ಠಾವಂತರನ್ನು ಕಡೆಗಣಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಯಾವ ಕಾರಣಕ್ಕೆ ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಕಾರ್ಯಕರ್ತರಿಗೆ ನಾಯಕರು ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರನ್ನೇ ಚುನಾವಣೆಯಲ್ಲಿ ಸೋಲಿಸಿದ್ದಾರೆ ಅಂದಮೇಲೆ ಮೈತ್ರಿಗೆ ಅರ್ಥ ಎಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ನಾಯಕರೇ ಕಾರಣ.
-ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ