ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಅರಣ್ಯ ಪ್ರದೇಶಕ್ಕೆ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮೀಸಲು ಅರಣ್ಯ ಪ್ರದೇಶವೆಂದು ಮರುನಾಮಕರಣಕ್ಕೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ ಸಚಿವ ಎಂ.ಬಿ.ಪಾಟೀಲ, ತಾವುಗಳು ಸಿದ್ದೇಶ್ವರ ಶ್ರೀಗಳ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಶ್ರೀಗಳ ನೆನಪಿನಲ್ಲಿ ಒಂದು ಸಾವಿರ ಎಕರೆ ಅರಣ್ಯ ಪ್ರದೇಶ ಅಭಿವೃದ್ಧಿಪಡಿಸುವ ಘೋಷಣೆ ಮಾಡಿದ್ದೀರಿ ಎಂದು ನೆನಪಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದಲ್ಲಿ 624 ಹೆಕ್ಟೆರ್ ಮೀಸಲಿಟ್ಟ ಅರಣ್ಯ ಪ್ರದೇಶವಿದೆ. ನಿಮ್ಮ ಘೋಷಣೆ ಹಾಗೂ ಆಶಯದಂತೆ ಸರ್ಕಾರದ ಮಮದಾಪುರ ಅರಣ್ಯ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕಾರಣ ಸದರಿ ಆರಣ್ಯ ಪ್ರದೇಶಕ್ಕೆ ಸಿದ್ಧೇಶ್ವರ ಶ್ರೀಗಳ ಹೆಸರು ಮರು ನಾಮಕರಣ ಮಾಡುವಂತೆ ಕೋರಿದ್ದಾರೆ.
ಆದಿಲ್ ಶಾಹಿ ಸುಲ್ತಾನರ ಕಾಲದ ಇತಿಹಾಸ ಪ್ರಸಿದ್ದ ದೊಡ್ಡ ಕೆರೆ, ಸಣ್ಣಕೆರೆಗಳ ನೀರಿನ ಪಾತ್ರದಲ್ಲಿರುವ ವಿಜಯಪುರ ಜಿಲ್ಲೆಯ ಏಕೈಕ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶವಾಗಿದೆ. ಸದರಿ ಪ್ರದೇಶದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ವೈವಿಧ್ಯಮಯ ಅರಣ್ಯ ಹಾಗೂ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸಿದ್ದು, ಜೀವ ವೈವಿಧ್ಯ ತಾಣವಾಗುವ ಹಂತದಲ್ಲಿದೆ ಎಂದು ವಿವರಿಸಿದ್ದಾರೆ.
ಅನಂತರಾಗಿ ಉಳಿದ ಸಿದ್ದೇಶ್ವರ ಶ್ರೀಗಳು ತಮ್ಮ ಅಂತಿಮ ಅಭಿವಂದನಾ ಪತ್ರದಲ್ಲಿ ತಿಳಿಸಿದಂತೆ, ತಮಗಾಗಿ ಯಾವುದೇ ಸ್ಮಾರಕಗಳನ್ನು ನಿರ್ಮಿಸದೆ, ನಿಸರ್ಗದಲ್ಲಿಯೇ ಒಂದಾಗಿದ್ದಾರೆ. ಇಂತಹ ಪೂಜ್ಯನೀಯರ ವಿಚಾರಗಳನ್ನು ಅವರ ಆಶಯದಂತೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಸಚಿವ ಪಾಟೀಲ ಮನವಿಯಲ್ಲಿ ವಿವರಿಸಿದ್ದಾರೆ.
ಮನವಿ ಸಲ್ಲಿಕೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.