ಗದಗ: ಜಿಲ್ಲೆಯ ನೆರೆ ಹಾಗೂ ಪ್ರವಾಹ ಸಂತ್ರಸ್ತರ ಪಾಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸದಾ ಆಸರೆಯಾಗಿದ್ದು, ಕಳೆದ ಎರಡು ತಿಂಗಳಿಂದೀಚೆಗೆ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ತಕ್ಷಣಕ್ಕೆ ಸ್ಪಂದಿಸುತ್ತಿದ್ದಾರೆ. ಈ ನಡುವೆ ಕೋವಿಡ್ ಭಯದಿಂದ ಹೆಚ್ಚಾಗಿ ಆನ್‌ಲೈನ್ ಮೂಲಕವೇ ಜಿಲ್ಲಾಡಳಿತಕ್ಕೆ ಅಗತ್ಯ ಸಲಹೆ, ಸೂಚನೆ ನೀಡುವ ಮೂಲಕ ಪ್ರವಾಹ ಪೀಡಿತ ಜನರ ಕಷ್ಟಗಳಿಗೆ ನೆರವಾಗುತ್ತಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ಪ್ರವಾಹಕ್ಕಿಂತ ಅತಿವೃಷ್ಟಿಯಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಆಗಸ್ಟ್ ಎರಡನೇ ವಾರದಲ್ಲಿಮಲಪ್ರಭಾ ಮೇಲ್ಭಾಗದಲ್ಲಿ ಭಾರೀ ಮಳೆ ಸುರಿದಿತ್ತು. ನವಿಲುತೀರ್ಥ ಜಲಾಶಯದಲ್ಲಿ ಗರಿಷ್ಟ ಮಟ್ಟಕ್ಕೆ ನೀರು ತಲುಪಿದ್ದರಿಂದ ಸಾವಿರಾರು ಕ್ಯೂಸೆಕ್ ನೀರು ನದಿಗೆ ಹರಿಸಲಾಗಿತ್ತು. ಇದರಿಂದ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ, ಬೆಳ್ಳೇರಿ, ಕೊಣ್ಣೂರು, ಬೂದಿಹಾಳ ಸೇರಿದಂತೆ ನರಗುಂದ ಮತ್ತು ರೋಣ ತಾಲೂಕಿನ ತಲಾ 7 ಗ್ರಾಮಗಳು ಸೇರಿ ಒಟ್ಟು 14 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ.
ನದಿ ಪಾತ್ರದಲ್ಲಿ ನೀರು ಹೆಚ್ಚುತ್ತಿದ್ದಂತೆ ಲಖಮಾಪುರ ಗ್ರಾಮಸ್ಥರು ಬೆಳ್ಳೇರಿ ಕ್ರಾಸ್‌ಗೆ ಸ್ಥಳಾಂತರಗೊಂಡಿದ್ದರು. ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದರು. ತಾತ್ಕಾಲಿಕ ಶೆಡ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಾದರೂ, ಶೆಡ್ ನಿರ್ಮಾಣಕ್ಕೆ ಮೂರು ದಿನ ವಿಳಂಬವಾಯಿತು. ಅಲ್ಲದೇ, ಲಖಮಾಪುರದ ಗ್ರಮಸ್ಥರಿಗಾಗಿ ಬೆಳ್ಳೇರಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಜಿಲ್ಲಾಡಳಿತ ಕಾಳಜಿ ಆರಂಭಿಸಿತ್ತಾದರೂ, ಅದೇ ಆವರಣದಲ್ಲಿ ಕೋವಿಡ್ ಸೋಂಕಿತರಿಗೆ ನಿಗಾ ಘಟಕ ತೆರೆದಿದ್ದರಿಂದ ಅನೇಕರು ಹಿಂದೇಟು ಹಾಕಿದರು. ಅಲ್ಲದೇ, ಅಲ್ಲಿ ಸ್ಯಾನಿಟೈಸರ್ ಹಾಗೂ ಸ್ವಚ್ಛತೆ ಕೊರತೆಯ ಆರೋಪಗಳೂ ಕೇಳಿ ಬಂದವು. ಅ.2 ರಂದು ನರಗುಂದ ತಾಲೂಕಿನ ಬೂದಿಹಾಳ ನವ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದಾಗಲೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಕ್ಷಣ ಭೇಟಿ ನೀಡಿದ್ದರು. ಅಲ್ಲದೇ, ಗ್ರಾಮಸ್ಥರಿಗೆ ತಕ್ಷಣ ಅಗತ್ಯ ದವಸ ಧಾನ್ಯ ಒದಗಿಸುವ ವ್ಯವಸ್ಥೆ ಮಾಡಿದರು.
ಆದರೆ, ಅತಿವೃಷ್ಟಿಯಿಂದಾಗಿ ಜಿಲ್ಲೆಯ ಇತರೆ ಭಾಗದಲ್ಲಿ ಸಾಕಷ್ಟು ಮನೆಗಳು ಕುಸಿದು, ಜನರು ಸಂಕಷ್ಟಕ್ಕೆ ಸಿಲುಕಿದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪಗಳಿವೆ. ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸಂಭವಿಸಿದ ಹಾನಿ ಮತ್ತು ಪರಿಹಾರ ಕುರಿತಂತೆ ಜಿಲ್ಲಾಡಳಿತದೊಂದಿಗೆ ಆನ್‌ಲೈನ್‌ನಲ್ಲಿ ಸಭೆ ನಡೆಸಿದ್ದೇ ಹೆಚ್ಚು.