Advertisement

ಸಾರಿಗೆ ಸಚಿವರ ತಾಲೂಕಿನಲ್ಲೇ ವಾಹನ ನಂಬರ್‌ ಪ್ಲೇಟ್‌ ನಿಯಮಕ್ಕಿಲ್ಲ ಕಿಮ್ಮತ್ತು

02:02 PM Dec 20, 2020 | sudhir |

ಅಥಣಿ: ಸಾರಿಗೆ ಸಚಿವರ ಕ್ಷೇತ್ರ ಸೇರಿದಂತೆ ಇಡೀ ತಾಲೂಕಿನಾದ್ಯಂತ ಅಸಂಖ್ಯಾತ ಬೈಕ್‌ ಸವಾರರು ತಮ್ಮ ವಾಹನಗಳಿಗೆ ಹೊಸ ಡಿಸೈನ್‌ನ ನಂಬರ್‌ ಪ್ಲೇಟ್‌ ಅಳವಡಿಸಿಕೊಂಡು ತಿರುಗಾಡಿ ಸಾರಿಗೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದರೂ ಕೂಡ ಪೊಲೀಸ್‌
ಇಲಾಖೆ ಹಾಗೂ ಆರ್‌.ಟಿ.ಓ ಅಧಿಕಾರಿಗಳು ಮಾತ್ರ ಇದು ತಮಗೆ ಸಂಬಂಧಿಸಿಲ್ಲ ಎಂಬ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

Advertisement

ಬೈಕ್‌ ಸೇರಿದಂತೆ ಎಲ್ಲಾ ವಾಹನಗಳ ನಂಬರ್‌ಪ್ಲೇಟ್‌ ಹೇಗಿರಬೇಕೆಂದು ನಿಯಮಗಳಿವೆ. ಪ್ರತಿಯೊಂದು ವಾಹನಗಳ ನಂಬರ್‌ಪ್ಲೇಟ್‌ ಅಳತೆ, ಅಕ್ಷರಗಳ ವಿನ್ಯಾಸಗಳ ಬಗ್ಗೆ ನಿರ್ದಿಷ್ಟ ಮಾನದಂಡವಿದೆ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ನಂಬರ್‌ಪ್ಲೇಟ್‌ ಅಳವಡಿಸಿಕೊಂಡು ಅನೇಕರು ಯಾವುದೇ ಭಯವಿಲ್ಲದೆ ತಿರುಗಾಡುತ್ತಿರುವುದು
ಸಾಮಾನ್ಯವಾಗಿಬಿಟ್ಟಿದೆ.

ಬಹುತೇಕ ಯುವಜನರಲ್ಲಿ ಇಂತಹ ಫ್ಯಾನ್ಸಿ ನಂಬರ್‌ ಪ್ಲೇಟ್‌ಗಳ ಹುಚ್ಚು ಅತಿರೇಕಕ್ಕೂ ಹೋದದ್ದುಂಟು. ಕೆಲವರು ದಾದಾ, ಬಾಸ್‌, ರಾಜೆ, ಬಪ್ಪಾ ಮೋರಯಾ, ಅಪ್ಪನ ಆಶೀರ್ವಾದ, ಡ್ಯಾಡ್‌ ಗಿಫ್ಟ, ಮಹಾನಾಯಕ, ಅಥಣೀಶ, ಚಿನ್ನು, ಆಂಜನೇಯನ ಮುಖ ಮುಂತಾದವುಗಳು ನಂಬರ್‌ಪ್ಲೇಟ್‌ಗಳಲ್ಲಿ ರಾರಾಜಿಸುತ್ತಿವೆ. ಇನ್ನೂ ಕೆಲವರ ನಂಬರ್‌ಪ್ಲೇಟ್‌ಗಳಲ್ಲಿ ವಾಹನದ ನೋಂದಣಿ ಸಂಖ್ಯೆಯೇ ಇರುವುದಿಲ್ಲ ಬದಲಾಗಿ ಚಿತ್ರನಟರ ಪೊಟೊಗಳೇ ನಂಬರ್‌ ಪ್ಲೇಟ್‌ಗಳಾಗಿದ್ದು ಇದನ್ನು ನೋಡಿ ಅನೇಕರು ಅದೇ ರೀತಿ ಹಾಕಿಸುತ್ತಿದ್ದಾರೆ.

ವಾಹನ ಪತ್ತೆಗೆ ಸಮಸ್ಯೆ, ಅಪರಾಧ, ಕಳವು ಅಥವಾ ನಿಯಮ ಉಲ್ಲಂಘನೆ ಆದಾಗ ಸರಿಯಾಗಿ ನಂಬರ್‌ ಬರೆಸದ ವಾಹನ ಪತ್ತೆ ಹಚ್ಚುವುದು ಪೊಲೀಸರಿಗೆ ಕಠಿಣವಾಗುತ್ತದೆ. ಸರಗಳ್ಳತನ ಮಾಡಲು ದುಷ್ಕರ್ಮಿಗಳು ಪ್ರಮುಖವಾಗಿ ದ್ವಿಚಕ್ರ ವಾಹನಗಳನ್ನೇ ಬಳಸುತ್ತಾರೆ. ಇಂತಹ ಸಂದರ್ಭದಲ್ಲಿ ವಾಹನದ ನೊಂದಣಿ ಸಂಖ್ಯೆ ಗುರುತಿಸುವುದು ಪ್ರಮುಖವಾಗುತ್ತದೆ. ಆದರೆ ಫ್ಯಾನ್ಸಿ ನಂಬರ್‌ ಪ್ಲೇಟ್‌ಗಳಿಂದ ವಾಹನ ಪತ್ತೆ ಸಾಧ್ಯವಾಗದು.

ಸುಖಾಸುಮ್ಮನೆ ಶೋಕಿಗಾಗಿ ಏನೇನೋ ಬರೆದುಕೊಂಡು ಓಡಾಡುವವರಿಗೆ ಕಾನೂನು ರೀತಿ ಬಿಸಿಮುಟ್ಟಿಸುವುದು ಅಗತ್ಯವಾಗಿದೆ.
ಮಾಸ್ಕ್-ಹೆಲ್ಮೆಟ್‌ ಕಡ್ಡಾಯಕ್ಕಷ್ಟೇ ಆಸಕ್ತಿ: ಮಾಸ್ಕ್ ಹಾಗೂ ಹೆಲ್ಮೆಟ್‌ ಹಾಕಿಕೊಳ್ಳಿ ಎಂದು ಹೇಳಿ ದಂಡ ಹಾಕುವ ಪೋಲಿಸರು ಇತರ ನಿಯಮಗಳ ಪಾಲನೆಗೆ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

Advertisement

ಪೊಲೀಸರು ಲೈಸನ್ಸ್, ಆರ್‌.ಸಿ, ವಿಮೆ, ಮಾಲಿನ್ಯ ನಿಯಂತ್ರಣ ಚೀಟಿ ಮುಂತಾದ ದಾಖಲೆಗಳು ಸಹ ಸರಿಯಾಗಿ ಇವೆಯೋ
ಇಲ್ಲವೋ ಎಂದು ತಪಾಸಣೆ ಮಾಡಿದರೆ ನಿಜವಾದ ಸಾರಿಗೆ ನಿಯಮಗಳ ಪಾಲನೆಯಾಗುತ್ತದೆ ಎನ್ನುವುದು ಸಾರ್ವಜನಿಕರ ಅಂಬೋಣ.

– ಸಂತೋಷ ಬಡಕಂಬಿ

Advertisement

Udayavani is now on Telegram. Click here to join our channel and stay updated with the latest news.

Next