Advertisement

ರಾಜ್ಯ ಗೃಹ ಸಚಿವರಿಂದ ಶಾಲಾ ಗೃಹ ಸಚಿವನ ದತ್ತು!

03:45 AM Jan 13, 2017 | |

ಪುತ್ತೂರು: ಪುತ್ತೂರು ನಗರದ ಹಾರಾಡಿ ಶಾಲೆಯ ಗೃಹ ಸಚಿವ ದಿವಿತ್‌ ರೈ ಅವರ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ತಾನು ಭರಿಸುವುದಾಗಿ ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರು ಘೋಷಿಸಿದ್ದಾರೆ.

Advertisement

ಶಾಲಾ ಶಿಕ್ಷಕರ ವರ್ಗಾವಣೆ ತಡೆ ಹಿಡಿಯುವಂತೆ ಪುತ್ತೂರು ನಗರದ ಹಾರಾಡಿ ಶಾಲೆಯ ಗೃಹ ಸಚಿವ ದಿವಿತ್‌ ರೈ ಅವರು ರಾಜ್ಯ ಗೃಹಸಚಿವ ಡಾ| ಜಿ. ಪರಮೇಶ್ವರ್‌ಗೆ ಮೊಬೈಲ್‌ ಸಂದೇಶ ಕಳುಹಿಸಿ, ಶಿಕ್ಷಕರ ವರ್ಗಾವಣೆ ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಘಟನೆ ಕೆಲವು ತಿಂಗಳ ಹಿಂದೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.

ಮಕ್ಕಳ ಸಂಖ್ಯೆಗೆ ಆಧರಿತವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಹಾರಾಡಿ ಶಾಲೆಯ ನಾಲ್ವರು ಶಿಕ್ಷಕರ ವರ್ಗಾವಣೆ ಆದೇಶ ಹೊರಡಿಸಲಾಗಿತ್ತು. ಈ ಶಿಕ್ಷಕರನ್ನು ವರ್ಗಾಯಿಸದಂತೆ ಶಾಲಾ ವಿದ್ಯಾರ್ಥಿ ದಿವಿತ್‌ ರೈ ಸಂದೇಶ ರವಾನಿಸಿದ್ದು, ಅದಕ್ಕೆ ಗೃಹ ಸಚಿವರು ಸ್ಪಂದನೆ ನೀಡಿದ್ದರು.

ಪವರ್‌ ಫುಲ್‌ “ಸಚಿವ’
ಅದೇ ಹಾರಾಡಿ ಶಾಲೆಯ ಹೇಮಂತದ ಸಂಭ್ರಮಕ್ಕೆ ಗುರುವಾರ ಆಗಮಿಸಿದ ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಘಟನೆಯನ್ನು ಮೆಲುಕು ಹಾಕಿದರು. ಸಂದೇಶ ಬಂದ ಅನಂತರ ತಾನು ಶಿಕ್ಷಣ ಸಚಿವರಿಗೆ ವರ್ಗಾವಣೆ ಮಾಡದಂತೆ ಕಟ್ಟಪ್ಪಣೆ ಹೊರಡಿಸಿದ ಸಂದರ್ಭವನ್ನು ಸ್ಮರಿಸಿಕೊಂಡರು. ಇಲ್ಲಿನ ಗೃಹಸಚಿವ ಪವರ್‌ ಫುಲ್‌ ಎಂದು ಶಹಬ್ಟಾಸ್‌ಗಿರಿ ಸಲ್ಲಿಸಿದರು.

10 ಲಕ್ಷ ರೂ. ಅನುದಾನ
ಶಾಲೆಯ ಪರವಾಗಿ ಗೃಹಸಚಿವ ಡಾ| ಜಿ. ಪರಮೇಶ್ವರ್‌ ಮತ್ತು ಶಾಲಾ ಗೃಹ ಸಚಿವ ದಿವಿತ್‌ ರೈ ಅವರನ್ನು ಸಮ್ಮಾನಿಸುವ ಸಂದರ್ಭದಲ್ಲಿ, ಶಾಲಾ ನಾಯಕ ಶರಣ್‌ “ಸಚಿದ್ವಯರು’ ಎಂದು ಉಲ್ಲೇಖೀಸಿದ್ದಕ್ಕೆ ಗೃಹಸಚಿವರು ಮೆಚ್ಚುಗೆ ಸೂಚಿಸಿದರು. ಶಾಲಾ ಪ್ರಯೋಗಾಲಯಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next