ಹೊಸದಿಲ್ಲಿ: ಫೇಲ್ ಆದ ವ್ಯಕ್ತಿ ಎಂದಿಗೂ ಟಾಪರ್‌ರನ್ನು ವಿರೋಧಿಸುತ್ತಾನೆ. ಹಾಗೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಫೇಲಾದ ವಿದ್ಯಾರ್ಥಿಯಿದ್ದಂತೆ. ಅವರಿಗೆ ಟಾಪರ್ ನರೇಂದ್ರ ಮೋದಿ ಯವರನ್ನು ಕಂಡಾಗ ಸಹಜವಾಗಿಯೇ ಅಸೂಯೆ ಮೂಡುತ್ತದೆ. ಪ್ರತಿ ಬಾರಿ ಮಾತನಾಡುವಾಗಲೂ ಅವರ ಮಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯ ಕ್ತಿಕ ದಾಳಿಯೇ ಇರುತ್ತದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ ಜೇಟ್ಲಿ ಬ್ಲಾಗ್‌ನಲ್ಲಿ ರವಿವಾರ ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ನಡೆಸಿದ್ದಾರೆ. ದೇಶದ ಸಂಸ್ಥೆಗಳನ್ನು ಬಿಜೆಪಿ ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಸಂಸತ್ತನ್ನೇ ಬಲಹೀನಗೊಳಿಸಿದ್ದು ಇದೇ ಪಂಡಿತ್ ಜವಾಹರಲಾಲ ನೆಹರೂ ಅವರ ಮೊಮ್ಮಗ ಎಂದು ಜೇಟ್ಲಿ ಆರೋಪಿಸಿದ್ದಾರೆ.
ಪ್ರತಿ ಅಧಿವೇಶನಕ್ಕೂ ಅಡ್ಡಿಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಲೇ ಇದೆ. ರಾಜ್ಯಸಭೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಚರ್ಚೆ ನಡೆಯುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ ಭಾಷಣದಲ್ಲಿ ಕಾಲೇಜು ಮಟ್ಟದ ಪ್ರಬುದ್ಧತೆ ಕಾಣಿಸುತ್ತದೆ. ಮೋದಿ ಸರಕಾರದ ವಿರುದ್ಧ ವಿಪಕ್ಷಗಳು ಸುಳ್ಳಿನ ಕ್ಯಾಂಪೇನ್ ನಡೆಸಿವೆ. ಸುಳ್ಳಿನ ಪ್ರಚಾರ ದೀರ್ಘಕಾಲದವರೆಗೆ ಬಾಳುವುದಿಲ್ಲ. ಒಂದು ಸುಳ್ಳಿನಿಂದ ಇನ್ನೊಂದು ಸುಳ್ಳಿಗೆ ರಾಹುಲ್ ಬದಲಾವಣೆ ಮಾಡುತ್ತಲೇ ಇದ್ದಾರೆ ಎಂದು ಜೇಟ್ಲಿ ತನ್ನ ಬ್ಲಾಗ್‌ನಲ್ಲಿ ಆರೋಪಿಸಿದ್ದಾರೆ. ಮತಯಂತ್ರದ ಬಗ್ಗೆ ಕಾಂಗ್ರೆಸ್ ಹಾಗೂ ವಿಪಕ್ಷಗಳು ಆರೋಪ ಮಾಡುತ್ತಿವೆ. ಆದರೆ ಇದು ವಿರೋಧಿಯ ಮೇಲೆ ಆರೋಪ ಮಾಡುವ ತಂತ್ರ ಮಾತ್ರವಲ್ಲ. ಚುನಾವಣಾ ಆಯೋಗದ ಮೇಲೆ ಮಾಡುವ ದಾಳಿ ಎಂದು ಜೇಟ್ಲಿ ಆರೋಪಿಸಿದ್ದಾರೆ.
ನೈತಿಕ ದಿವಾಳಿತನಕ್ಕೆ ಮೋದಿ ಉದಾಹರಣೆ
ಅಸಮರ್ಥತೆ ಹಾಗೂ ಸೊಕ್ಕಿನಿಂದಾಗಿ ನೈತಿಕ ದಿವಾಳಿತನಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಿದರ್ಶನವಾಗಿ ಕಾಣುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿ ಸಂಸ್ಥೆಗಳಾದ ಓಲಾ ಹಾಗೂ ಉಬರ್ ಸಂಸ್ಥೆಗಳು ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸಿವೆ ಎಂದು ನೀತಿ ಆಯೋಗ ವರದಿ ಮಾಡಿದೆ. ಆದರೆ ಲಕ್ಷಗಟ್ಟಲೆ ಹೂಡಿಕೆ ಮಾಡಿ ನಾನೇ ಈ ಸಂಸ್ಥೆಗಳ ಮೂಲಕ ಉದ್ಯೋಗ ಪಡೆದುಕೊಂಡಿದ್ದೇನೆ. ಸರಕಾರ ನನಗೆ ಉದ್ಯೋಗ ದೊರಕಿಸಿಕೊಟ್ಟಿಲ್ಲ ಎಂದು ಡ್ರೈವರ್ ಒಬ್ಬರು ಹೇಳುತ್ತಾರೆ ಎಂದು ರಾಹುಲ್ ಟೀಕಿಸಿದ್ದಾರೆ. ಕಳೆದ 45 ವರ್ಷಗಳಲ್ಲೇ ಈ ವರ್ಷ ನಿರುದ್ಯೋಗ ದರ ಅತಿ ಹೆಚ್ಚು ಎಂದು ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿರುವುದನ್ನು ಆಧರಿಸಿ ರಾಹುಲ್ ವಾಗ್ಧಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರಿಗೆ “ರಫೇಲ್ ಫೋಬಿಯಾ’ ಶುರುವಾಗಿದೆ. ಹಾಗಾಗಿ ಅವರು ನಾಚಿಕೆಯಿಲ್ಲದೇ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ರಾಹುಲ್ ಬಳಸುತ್ತಿರುವ ಭಾಷೆಗಳು ಅವರ ಘನತೆಗೆ ತಕ್ಕುದಲ್ಲ.
– ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ