Advertisement

ಸಚಿವ ಪ್ರಿಯಾಂಕ್‌ ಹೇಳಿಕೆಗೆ ಬಿಜೆಪಿ ಮುಖಂಡರ ಗರಂ

10:09 AM Nov 07, 2017 | Team Udayavani |

ಚಿತ್ತಾಪುರ: ಹಲಕಟ್ಟಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಕಾಂಗ್ರೆಸ್‌ ಮುಖಂಡರು ಚಿತ್ತಾಪುರ ಮಾರಲು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಯನ್ನು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ಶ್ರೀನಿವಾಸ ಸಗರ, ಲಿಂಗಾರೆಡ್ಡಿ ಬಾಸರೆಡ್ಡಿ, ಸೋಮಶೇಖರ ಪಾಟೀಲ ಬೆಳಗುಂಪ್ಪಾ, ಭೀಮಣ್ಣ ಸಿಬಾ, ಶರಣಪ್ಪ ನಾಟೀಕಾರ ಖಂಡಿಸಿದ್ದಾರೆ.

Advertisement

ಪಟ್ಟಣದಲ್ಲಿ ಸೋಮಶೇಖರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ಎಸ್‌.ಎಂ. ಕೃಷ್ಣಾ ಅವರು ಕಾಂಗ್ರೆಸ್‌ ಪಕ್ಷದಿಂದಲೇ ಗೆದ್ದು ಮುಖ್ಯಮಂತ್ರಿ ಆಗಿದ್ದರು. ಶ್ರೀನಿವಾಸ ಪ್ರಸಾದ ಅವರು ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಅದೇ ರೀತಿ ಎಚ್‌. ವಿಶ್ವನಾಥ ಅವರು ಸಹ ಮೂಲ ಕಾಂಗ್ರೆಸ್ಸಿಗರಾಗಿ ದುಡಿದಿದ್ದಾರೆ. ಆದರೆ ಅವರು ಕಾಂಗ್ರೆಸ್‌ ಬಿಟ್ಟು ಬೇರೆ ಬೇರೆ ಪಕ್ಷಗಳನ್ನು ಸೇರ್ಪಡೆಯಾಗಿದ್ದಾರೆ. ಅಂದರೆ ಅವರು ಸಹ ತಮ್ಮ ಕ್ಷೇತ್ರಗಳನ್ನು ಮಾರಾಟ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. 

ಚಿತ್ತಾಪುರ ಮಾರಾಟ ಮಾಡಲು ನಾವ್ಯಾರು? ನಮ್ಮ ಆಸ್ತಿ ನಾವೇ ಮಾರಿಕೊಳ್ಳಬೇಕಾದರೆ ಹೆಂಡ್ತಿ, ಮಕ್ಕಳು ಬೀಗರು ನೆಂಟರಿಗೆ ಕೇಳಿ ಮಾರಬೇಕಾಗುತ್ತದೆ. ನಾನು ಸಹ ಕ್ಷೇತ್ರದಿಂದ 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೆ. ಆದರೆ ಚಿತ್ತಾಪುರ ಮಾರೀದ್ವಾ. ಒಂದು ವೇಳೆ ನಾವು ಮಾರಿದ್ದೆ ಆದರೆ ನೀವು ಇಲ್ಲಿ ಬಂದು ನಿಲ್ಲಕ್ಕೆ ಆಗುತಿತ್ತಾ ಎಂದು ಪ್ರಶ್ನಿಸಿದರು.

ಸಚಿವ ಸ್ಥಾನದಲ್ಲಿದ್ದು ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಇಡೀ ಕಲಬುರಗಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕ ಇದ್ದಾರೆ. ಉಳಿದ ಎಂಟು ಕಡೆ ಕಾಂಗ್ರೆಸ್‌ ಶಾಸಕರೇ ಇದ್ದಾರೆ. ಆದರೆ ಆ ಎಂಟು ಕ್ಷೇತ್ರದಲ್ಲಿ ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಚಿತ್ತಾಪುರ ಕ್ಷೇತ್ರದಿಂದಲೇ ನೂರಾರು ಕಾರ್ಯಕರ್ತರು, ಮುಖಂಡರು ಬಿಟ್ಟು ಹೋಗುತ್ತಿದ್ದಾರೆ ಎನ್ನುವುದನ್ನು ಮೊದಲು ಸಚಿವ ಪ್ರಿಯಾಂಕ್‌ ಖರ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಒಂದು ಪಕ್ಷದಲ್ಲಿ 5 ವರ್ಷ ಇರಲಿ ಅಥವಾ 1 ವರ್ಷ ಇರಲಿ ಆಪಕ್ಷದ ಬಗ್ಗೆ ನಾವು ಅಗೌರವದ ಮಾತುಗಳನ್ನು ಆಡಿಲ್ಲ. ನಾವು ಮನನೊಂದು ಪಕ್ಷ ಬೀಡುತ್ತಿದ್ದೆವೆ.  ನಮ್ಮ ರಾಜೀನಾಮೆ ಅಂಗೀಕರಿಸಿ ಎಂದು ಲಿಖೀತ ರೂಪದಲ್ಲಿ ಕೊಟ್ಟಿದ್ದೆವೆ. ಆದರೆ ನೀವು ಒಬ್ಬ ಸಚಿವರಾಗಿ ಈ ರೀತಿ ಹೇಳಿಕೆ ನೀಡಿ ನಿಮ್ಮ ಸ್ಥಾನಕ್ಕೆ ನೀವೇ ಅಗೌರವ ತೋರಿಕೊಳ್ಳುತ್ತಿದ್ದಿರಿ. ಮೊದಲು ಕ್ಷೇತ್ರದಲ್ಲಿ ಯಾವ ಸಮಸ್ಯೆಗಳು ಇವೆ ಎಂಬುವುದರ ಬಗ್ಗೆ ಮನವರಿಕೆ ಮಾಡಿಕೊಳ್ಳಿ. ಕ್ಷೇತ್ರದಲ್ಲಿನ ಆಸ್ಪತ್ರೆಗಳಿಗೆ, ಶಾಲೆಗಳಿಗೆ, ಹಾಸ್ಟೆಲ್‌ಗ‌ಳಿಗೆ ಒಮ್ಮೆ ಆದರೂ ಭೇಟಿ ನೀಡಿದ್ದಿರಾ? ಬರೀ ಸಭೆ ಸಮಾರಂಭಗಳಲ್ಲಿ ಡಾ| ನಂಜುಡಪ್ಪ ವರದಿ ಅನ್ವಯ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆನೆ ಎಂದು ಹೇಳುತ್ತಿರುವುದು ಎಷ್ಟರ
ಮಟ್ಟಿಗೆ ಸರೀ ಎಂದು ಪ್ರಶ್ನಿಸಿದರು. 

Advertisement

ನಾನು ಶಾಸನಿದ್ದಾಗಲೂ ಚಿತ್ತಾಪುರ ಮತಕ್ಷೇತ್ರಕ್ಕಾಗಿ ಹಗಲಿರಳು ಶ್ರಮಿಸಿ ರಸ್ತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆ ನಿವಾರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೆನೆ. ಆದರೆ ಪ್ರಿಯಾಂಕ್‌ ಅವರು ಎಚ್‌ಕೆಆರ್‌ಡಿಬಿಯಿಂದ ಮಂಜೂರಾದ ಅನು ದಾನವನ್ನು ಬಳಸಿಕೊಂಡು ತಾಲೂಕಿನಲ್ಲಿ ರಸ್ತೆ ಒಂದನ್ನು ನಿರ್ಮಿಸಿ ಇಡೀ ಕ್ಷೇತ್ರವನ್ನೇ ಅಭಿವೃದ್ಧಿ ಪಡಿಸುತ್ತಿದ್ದೆನೆ ಎಂದು ಹೇಳುತ್ತಾರೆ.  ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಹೋಗಿ ಭೇಟಿ ನೀಡಲಿ. ಇವರು ಎಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಅವಾಗ ಗೋತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

ಮುಖಂಡ ಶ್ರೀನಿವಾಸ ಸಗರ ಮಾತನಾಡಿ, ಚಿತ್ತಾಪುರ ಮಾರಾಟ ಮಾಡಲು ಬಿಜೆಪಿಗೆ ಸೇರ್ಪಡೆ ಎಂಬ ಹೇಳಿಕೆ ನೀಡಿದ್ದರಿಂದ ಇಡೀ ಚಿತ್ತಾಪುರ ಜನರನ್ನು ಅವಮಾನ ಮಾಡಿದಂತಾಗಿದೆ. ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. 

ಎರಡು ಎತ್ತುಗಳ ಚಿಹ್ನೆ ಇದ್ದಾಗ ನಮ್ಮ ತಂದೆ ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದರು. ಸುಮಾರು ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ದುಡಿದಿದ್ದಾರೆ. ನಾನು ಸಹ 45 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದ ಏಳಿಗೆಗಾಗಿ ಶ್ರಮಿಸಿದವನು. ನಾನು ಮತ್ತು ನಮ್ಮ ತಂದೆ ಮೂಲ ಕಾಂಗ್ರೆಸಿಗರು. ನಮಗೆ ಯಾರದ್ದೆ ದುಡ್ಡು ತಿಂದಿವಿ ಅಂತ್ತಾ ಹೇಳಿದರೆ ಅವರ ಮನೆ ಮುಂದೇ ಹೋಗಿ ಕಸ ಬಳಿದು ಬರುತ್ತೇವೆ ಎಂದರು.

ಮುಖಂಡ ಲಿಂಗಾರೆಡ್ಡಿ ಭಾಸರೆಡ್ಡಿ, ಚಿತ್ತಾಪುರದಲ್ಲಿ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 125ನೇ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದ ಹಣ ನೀಡಿ ರಾಜ್ಯದ ಮುಖ್ಯಮಂತ್ರಿ ಅವರನ್ನು ಕರೆಸಿ ಅದ್ಧೂರಿಯಾಗಿ ಆಚರಿಸಿದರು. ಆದರೆ ಉಳಿದ ಜಯಂತಿಗಳನ್ನು ಅದ್ಧೂರಿಯಾಗಿ ಏಕೆ ಆಚರಿಸಲಿಲ್ಲ? ಸೌಜನ್ಯಕ್ಕಾದರೂ ಉಳಿದ ಜಯಂತಿಗಳಲ್ಲಿ ಭಾಗವಹಿಸಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next