ಹಾಸನ: “ಮಂತ್ರಿಸ್ಥಾನ ಹೋದ್ರೂ ಪರವಾಗಿಲ್ಲ. ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಪಡೆದುಕೊಂಡು ಅವ್ಯವಹಾರ ನಡೆಸುತ್ತಿರುವವರನ್ನು ಬಲಿ ಹಾಕದೆ ಬಿಡುವುದಿಲ್ಲ. ಒಂದು ವಾರ ಟೈಂ ಕೊಡಿ, ಏನೇನು ಮಾಡುತ್ತೇನೆ ನೋಡ್ತಾ ಇರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ರೈತರಿಗೆ ಪ್ರತಿ ಎಕರೆಗೆ ಒಂದೆರಡು ಲಕ್ಷ ರೂ. ನೀಡಿ ಭೂ ಸ್ವಾಧೀನಪಡಿಸಿಕೊಂಡು ಕೈಗಾರಿಕೋದ್ಯಮಿಗಳಿಗೆ ಭೂಮಿ ಮಂಜೂರು ಮಾಡಿ ಅವ್ಯವಹಾರಕ್ಕೆ ಕುಮ್ಮಕ್ಕು ನೀಡಿರುವ ಕೆಐಎಡಿಬಿ ಅಧಿಕಾರಿಗಳು, ಕೈಗಾರಿಕೆಗಾಗಿ ಭೂಮಿ ಪಡೆದುಕೊಂಡು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವವರ ಬಲಿ ಹಾಕದೆ ಬಿಡುವುದಿಲ್ಲ ಎಂದು ಹೇಳಿದರು.
ಕೆಐಎಡಿಬಿಯಷ್ಟೇ ಅಲ್ಲ, ಹೇಮಾವತಿ ಜಲಾಶಯ ಯೋಜನೆ ಭೂ ಸ್ವಾಧೀನಾಧಿಕಾರಿಯವರ ಕಚೇರಿ, ಎನ್‌ಎಚ್‌ಎಐ ಭೂ ಸ್ವಾಧೀನಾಧಿಕಾರಿಯವರ ಕಚೇರಿಗಳು ಭೂ ಗಳ್ಳರ ದಂಧೆಗೆ ಕೇಂದ್ರ ಸ್ಥಾನಗಳಾಗಿವೆ. ರೈತರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶೀಘ್ರವೇ ಮಾಹಿತಿ ಪಡೆದುಕೊಂಡು ಆನಂತರ ತನಿಖೆ ನಡೆಸಲಾಗುವುದು ಎಂದರು.
ಭೂ ಕುಸಿತದಿಂದ ವಾಹನ ಸಂಚಾರ ಬಂದ್ ಆಗಿರುವ ರಾಷ್ಟ್ರೀಯ ಹೆದ್ದಾರಿ- 75ರ ಶಿರಾಡಿಘಾಟ್ ಮತ್ತು ಮೈಸೂರು -ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಇನ್ನು 10 ದಿನಗಳೊಳಗೆ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
– ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ