Advertisement

ಹೊರಗಿನ ಭತ್ತ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಶ್ರೀನಿವಾಸ ಪೂಜಾರಿ

12:37 AM Jan 15, 2022 | Team Udayavani |

ಉಡುಪಿ: ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸ್ಥಳೀಯ ಕುಚ್ಚಲಕ್ಕಿ ಖರೀದಿಗೆ ಅವಕಾಶ ನೀಡಿದ್ದರೂ ಬಹುತೇಕ ರೈತರು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಆದ್ದರಿಂದ ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಭತ್ತವನ್ನು ಬೇರೆ ಜಿಲ್ಲೆಗಳಿಂದ ಖರೀದಿಸುವ ಕುರಿತಂತೆ ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನ ನೀಡಿದರು.

Advertisement

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ, ದ.ಕ., ಉಡುಪಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ ನೀಡುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಕರಾವಳಿಯ ರೈತರು ಬೆಳೆಯುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಮತ್ತು ಉಮ ತಳಿಯ ಭತ್ತವನ್ನು ಬೆಳೆದಿರುವ ರಾಜ್ಯದ ಶಿವಮೊಗ್ಗ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಬೆಂಬಲ ಬೆಲೆಯಡಿ ಖರೀದಿಸಲು ಅನುಮತಿ ಕೋರುವಂತೆ ಸೂಚಿಸಿದರು.

ರೈತರು ನೋಂದಾಯಿಸಿ
ಜಿಲ್ಲೆಯ ರೈತರು ತಮ್ಮ ಭತ್ತವನ್ನು ಬೆಂಬಲ ಬೆಲೆಯಲ್ಲಿ ಮಾರಲು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಾಯಿಸಲು ಅವಕಾಶವಿದೆ. ಭತ್ತವನ್ನು ಸಂಸ್ಕರಿಸುವ ಕುರಿತಂತೆ ಸ್ಥಳೀಯ ಅಕ್ಕಿ ಗಿರಣಿಗಳ ಮಾಲಕರೊಂದಿಗೆ ಶೀಘ್ರ ಚರ್ಚೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ:ಮಾಜಿ ಸಚಿವ,ನಿವೃತ್ತ ಐಎಎಸ್ ಅಧಿಕಾರಿ ಅಲೆಕ್ಸಾಂಡರ್ ನಿಧನ

ಖಾಯಂ ಅಕ್ಕಿ ಸಂಸ್ಕರಣಾ ಘಟಕ
ಪಡಿತರ ವ್ಯವಸ್ಥೆಯಲ್ಲಿ ವರ್ಷಕ್ಕೆ ಅಗತ್ಯವಿರುವ ಸ್ಥಳೀಯ ಭತ್ತದ ಪ್ರಮಾಣ, ಇಲ್ಲಿ ಬೆಳೆಯುವ ಭತ್ತದ ಪ್ರಮಾಣ, ಕೊರತೆಯಾಗುವ ಭತ್ತದ ಪ್ರಮಾಣ ಮತ್ತು ಹೊರ ಜಿಲ್ಲೆಗಳಿಂದ ಖರೀದಿಗೆ ಅಗತ್ಯವಿರುವ ಭತ್ತದ ಪ್ರಮಾಣದ ಕುರಿತು ಸಮಗ್ರ ಅಂಕಿ-ಅಂಶ ಸಂಗ್ರಹಿಸಬೇಕು. ಸ್ಥಳೀಯ ರೈತರಿಂದ ಖರೀದಿಸುವ ಭತ್ತ ಸಂಗ್ರಹಿಸಲು ಮತ್ತು ಅದನ್ನು ಅಕ್ಕಿಯಾಗಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಜಿಲ್ಲೆಯಲ್ಲಿಯೇ ದಾಸ್ತಾನು ಮಾಡಲು ಅಗತ್ಯವಿರುವ ಸುಸಜ್ಜಿತ ಖಾಯಂ ಅಕ್ಕಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸೂಕ್ತ ಸ್ಥಳ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶಿಸಿದರು.

Advertisement

ಆಹಾರ, ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ್‌ ನಡಹಳ್ಳಿ, ಉಪಾಧ್ಯಕ್ಷ ಕಿರಣ್‌ ಕೊಡ್ಗಿ,
ಆಹಾರ, ನಾಗರಿಕ ಸರಬರಾಜುಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌, ನಿರ್ದೇಶಕಿ ಶಮ್ಲಾ ಇಕ್ಬಾಲ್‌, ಜಿ.ಪಂ.ಉಪ ಕಾರ್ಯದರ್ಶಿ ಕಿರಣ್‌ ಪೆಡೆ°àಕರ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಆಹಾರ ಇಲಾಖೆ ಉಪ ನಿರ್ದೇಶಕ ಮೊಹಮದ್‌ ಇಸಾಕ್‌ ಇದ್ದರು.

ಭತ್ತ ಖರೀದಿ:
ಅವಧಿ ವಿಸ್ತರಣೆ
ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ನಿಗದಿಪಡಿಸಲಾಗಿದ್ದ ರೈತರ ನೋಂದಣಿ ದಿನವನ್ನು ಫೆ. 28ರ ವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next