Advertisement

ಕೆಡಿಪಿ ಸಭೆಗೆ ಮುಂದಾಗದ ಉಸ್ತುವಾರಿ ಸಚಿವ ಖರ್ಗೆ

07:27 AM Feb 28, 2019 | Team Udayavani |

ಕಲಬುರಗಿ: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್‌ ಖರ್ಗೆ ಕಳೆದ 9 ತಿಂಗಳ ಅವಧಿಯಲ್ಲಿ ಕೇವಲ ಒಂದೇ ಸಲ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ (ಕೆಡಿಪಿ) ಪ್ರಗತಿ ಪರಿಶೀಲನಾ ನಡೆಸಿದ್ದಾರೆ.

Advertisement

ಪ್ರತಿ ಮೂರು ತಿಂಗಳಿ ಗೊಮ್ಮೆಯಾದರೂ ಕೆಡಿಪಿ ಸಭೆ ನಡೆಸಬೇಕು. ನಾಲ್ಕೈದು ತಿಂಗಳಿಗೊಮ್ಮೆಯಾದರೂ ಸಭೆ ನಡೆಸಿದ್ದರೆ ಎರಡು ಸಭೆಗಳನ್ನಾದರೂ ನಡೆಸಬಹುದಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಒಂದೇ ಸಭೆ ನಡೆಸಿದ್ದು, ಮೊದಲ ಸಭೆಯಲ್ಲಿ ಖಡಕ್‌ ಆಗಿ ಹೇಳಿರುವುದು ಎಷ್ಟರ ಮಟ್ಟಿಗೆ ಪಾಲನೆಯಾಗಿದೆ ಎಂಬುದನ್ನು ಅವಲೋಕಿಸಲಿಕ್ಕಾದರೂ ಮಗದೊಂದು ಸಭೆ ನಡೆಸದಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಆರ್ಥಿಕ ವರ್ಷ್ಯಾಂತ್ಯದ ಮಾರ್ಚ್‌ ತಿಂಗಳು ಈಗ ಕಾಲಿಡುತ್ತಿರುವುದರಿಂದ ಜತೆಗೆ ವಾರದೊಳಗೆ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಇಷ್ಟೋತ್ತಿಗೆ ಸಚಿವರು ಕೆಡಿಪಿ ಸಭೆ ನಡೆಸಿ 47 ಇಲಾಖೆಗಳ ಸಮಗ್ರ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಸಮಗ್ರವಾಗಿ ಅವಲೋಕಿಸಬೇಕಿತ್ತು. ಆದರೆ ಸಚಿವರು ಸಭೆ ನಡೆಸಲು ಮುಂದಾಗಲೇ ಇಲ್ಲ. ಸಚಿವ ಪ್ರಿಯಾಂಕ್‌ ಖರ್ಗೆ ಅವರು 2018ರ ಸೆಪ್ಟೆಂಬರ್‌ 12ರಂದು ಪ್ರಥಮವಾಗಿ ಕೆಡಿಪಿ ಸಭೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.

ತದನಂತರ ಅಕ್ಟೋಬರ್‌ 1ರಂದು ಮುಂದುವರಿದ ಸಭೆ ನಡೆಸಿ ವಾರಕ್ಕೊಂದು ದಿನ ಜಿಲ್ಲಾ ಮಟ್ಟದ ಅಧಿಕಾರಿಗಳು ಹಳ್ಳಿಗೆ ಹೋಗಬೇಕು ಎಂದು ಸೂಚನೆ ನೀಡಿದ್ದರು. ಆದರೆ ಅವುಗಳು ಕೇವಲ ಸಭೆಯಲ್ಲಿ ಸೂಚನೆಗೆ ಸೀಮಿತವಾದವೇ ಎಂಬುದು ಈಗ ಸಭೆ ಚರ್ಚಾಂಶಗಳನ್ನು ಅವಲೋಕಿಸಿದಾಗ
ಕಂಡು ಬರುತ್ತಿದೆ. 

ಸಮಸ್ಯೆಗಳು ನೂರಾರು: ಜಿಲ್ಲೆಯಲ್ಲಿ ನೂರಾರು ಸಮಸ್ಯೆಗಳಿವೆ. ಎಂಬುದು ಪ್ರಥಮ ಕೆಡಿಪಿ ಸಭೆಯಲ್ಲೇ ಸಚಿವರಿಗೆ ಮನವರಿಕೆಯಾಗಿತ್ತು. ತೀವ್ರ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾದ್ಯಂತ ಉಲ್ಬಣಗೊಂಡಿದೆ. ಉದ್ಯೋಗ ಖಾತ್ರಿ ಪರಿಣಾಮಕಾರಿ ಅನುಷ್ಠಾನಗೊಳ್ಳದಿರುವುದು, ಪರಿಣಾಮಕಾರಿಯಾಗಿ ತೊಗರಿ ಖರೀದಿ ಪ್ರಕ್ರಿಯೆ ನಡೆಯದಿರುವುದು, ಹಲವು ಜಿಲ್ಲಾ ಪ್ರಮುಖ ಇಲಾಖಾಧಿಕಾರಿಗಳ ಹುದ್ದೆಗಳು ಖಾಲಿ, ವ್ಯಾಪಕಗೊಂಡಿದ್ದ ವಿವಿಧ ರೋಗಗಳ ಕುರಿತಾಗಿ ಆರೋಗ್ಯ ಇಲಾಖೆ ಪರಿಶೀಲನೆ, ಪರೀಕ್ಷೆ ಸುಧಾರಣೆ ನಿಟ್ಟಿನಲ್ಲಿ ಚರ್ಚೆ, ಮಾರ್ಚ್‌
ಮುಗಿಯಲಿಕ್ಕೆ ಬರುತ್ತಿರುವುದರಿಂದ ಲೋಕೋಪಯೋಗಿ, ಪಂಚಾಯತ್‌ ರಾಜ್‌ ಇಂಜನಿಯರಿಂಗ್‌, ಸಣ್ಣ ನೀರಾವರು, ಜಿಪಂ, ಪಾಲಿಕೆ ಸೇರಿದಂತೆ ಇತರ ಪ್ರಮುಖ ಇಲಾಖೆಗಳ ವಾರ್ಷಿಕ ಸಾಧನೆ ಅರಿಯಲಿಕ್ಕಾದರೂ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸಲೇಬೇಕಿತ್ತು.

Advertisement

ಅಕ್ರಮ ಮರಳುಗಾರಿಕೆ, ಅಬಕಾರಿ ಇಲಾಖೆ ಅವಾಂತರ ನಿಲ್ಲದಿರುವುದು, ಬೇಸಿಗೆ ಬಂದರೂ ಆರಂಭವಾಗದ ಶುದ್ಧ ಕುಡಿಯುವ ನೀರಿನ ಘಟಕ, ಕಾಮಗಾರಿಗಳಿಗೆ ಡೆಡ್‌ಲೈನ್‌ ನೀಡಲಿಕ್ಕಾದರೂ ಸಚಿವರು ಸಭೆ ನಡೆಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಜಿಲ್ಲೆಯ ಜನರು ಅಭಿಪ್ರಾಯ
ಪಟ್ಟಿದ್ದಾರೆ. ಪ್ರಿಯಾಂಕ್‌ ಖರ್ಗೆ ಉಸ್ತುವಾರಿ ಸಚಿವರಾಗಿ ನಡೆಸಿದ ಮೊದಲನೇ ಕೆಡಿಪಿ ಸಭೆಯಲ್ಲೇ ಅಧಿಕಾರಿಗಳ ಚಳಿ ಬಿಡಿಸಿದ್ದರಲ್ಲದೇ ಖಡಕ್‌ ವಾರ್ನಿಂಗ್‌ ನೀಡಿದ್ದರು.

ಕೆಲಸ ಮಾಡದ ಗುತ್ತಿಗೆದಾರರನ್ನು ಜಿಲ್ಲೆಯಿಂದ ಹೊರ ಹಾಕಿ ಎಂದು ಖಡಕ್‌ ಎಚ್ಚರಿಕೆ ನೀಡಿದ್ದರು. ಶಿಷ್ಟಾಚಾರ ಪಾಲನೆ ಮಾಡದ ಪಾಲಿಕೆ ಇಇ ಆರ್‌.ಪಿ. ಜಾಧವ್‌ ಅವರ ಬಿಡುಗಡೆ ಸೂಚನೆ ನೀಡಿದ್ದರಲ್ಲದೇ ಅಫಜಲಪುರ ತಾಲೂಕಿನ ಮಾಜಿ ಶಾಸಕರ ಹೊಲದಲ್ಲಿ ನಡೆದಿದೆ ಎನ್ನಲಾದ ವಿದ್ಯುತ್‌ ಕಳ್ಳತನ ಸಂಬಂಧವಾಗಿ ಎರಡು ವಾರದೊಳಗೆ ತನಿಖಾ ವರದಿ ಸಲ್ಲಿಸುವಂತೆ, ಇಲಾಖಾಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡುವ ಹಾಗೂ ಕ್ರಮ ಕೈಗೊಂಡಿದ್ದನ್ನು ದಾಖಲಿಸುವ ಸೇವಾ ಪುಸ್ತಕವನ್ನು ಕಡ್ಡಾಯವಾಗಿ ಪಾಲನೆ ಮಾಡುವುದು, ಕಾಮಗಾರಿಯಾಗದೇ ಬಿಲ್‌ ಮಾಡಿರುವ ಸಂಬಂಧ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ (ಕೆಆರ್‌ಡಿಎಲ್‌) ಅಧಿಕಾರಿಗಳಿಗೆ ವರದಿ ನೀಡುವುದು ಸೇರಿದಂತೆ ಇತರ ಕಾರ್ಯಗಳಿಗೆ ಸಚಿವರು ನಿರ್ದೇಶನ ನೀಡಿದ್ದರು. ಆದರೆ ಇವು ಯಾವ ಹಂತಕ್ಕೆ ಬಂದಿವೆ ಎನ್ನವುದಾರೂ ಅರಿಯಲು ಕೆಡಿಪಿ ಸಭೆ ಅಗತ್ಯವಾಗಿದೆ. 

ಒದಿತಿನಿ ಎಂದಿದ್ದರು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಥಮ ಕೆಡಿಪಿ ಸಭೆಯಲ್ಲಿ ಪಾಲಿಕೆ ಇಇ ಆರ್‌.ಪಿ ಜಾಧವ್‌ ಅವರಿಗೆ ಒದಿತಿನಿ ಎಂದಿದ್ದರು. ಇದು ನಂತರ ಭಾರೀ ಟೀಕೆಗೆ ಗುರಿಯಾಗಿತ್ತು. ತದನಂತರ ಸಚಿವರು ಒದಿತಿನಿ ಎಂದಿರುವುದನ್ನು ಸಮರ್ಥಿಸಿಕೊಂಡರು. ಸಚಿವರ ಮಾತು ಕವಡೆ ಕಾಸಿನ ಕಿಮ್ಮತ್ತು ಮಾಡಿದ್ದರಿಂದ ಹಾಗೂ ಕೆಲಸ ಕಾರ್ಯಗಳು ಆಗಲಿ ಎಂಬ ದೃಷ್ಟಿಯಿಂದ ಹಾಗೆ ಹೇಳಿದ್ದೇ ಎಂದಿದ್ದರು.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next