Advertisement

ಕಾಳೇನ ಅಗ್ರಹಾರ ಕೆರೆ ಸ್ಥಿತಿಗೆ ಸಚಿವೆ ಮರುಕ

11:59 AM Apr 23, 2017 | |

ಬೆಂಗಳೂರು: ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬೊಮ್ಮನಹಳ್ಳಿ ಬಳಿಯ ಕಾಳೇನ ಅಗ್ರಹಾರ ಕೆರೆಯನ್ನು ಸಂಸದರ ನಿಧಿಯಡಿ ಅಭಿವೃದ್ಧಿಗೊಳಿಸಲು ದತ್ತು ಪಡೆದುಕೊಂಡಿದ್ದು, ಶನಿವಾರ ಕೆರೆಯ ಪರಿಶೀಲನೆಗೆಂದು ತೆರಳಿ, ಅಲ್ಲಿನ ಸ್ಥಿತಿಯನ್ನು ಕಂಡು ಮರುಕ ವ್ಯಕ್ತಪಡಿಸಿದರು. 

Advertisement

ಬೆಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರೊಂದಿಗೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ಅವರು, ಕೆರೆ ಸಂಪೂರ್ಣವಾಗಿ ಮಲಿನವಾಗಿ ರುವುದನ್ನು ಕಂಡು ಬೇಸರಗೊಂಡರು. ಕೂಡಲೇ ಕೆರೆಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳು ವಂತೆ ಮತ್ತು ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕೆರೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರು, ನಾಗರಿಕ ಕ್ಷೇಮಾಭಿವೃದ್ದಿ ಸಂಘಟನೆಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸುವಂತೆ ಸಲಹೆ ನೀಡಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್‌ ಅವರು, “ನಿರ್ಲಕ್ಷ್ಯಕ್ಕೆ  ಒಳಗಾಗಿರುವ ಕಾಳೇನ ಅಗ್ರಹಾರ ಕೆರೆಯನ್ನು ಸಂಸದರ ನಿಧಿ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿ ದೆ. ಹೀಗಾಗಿ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ನಿವಾಸಿಗಳ ಬೆಂಬಲ ಅತ್ಯಗತ್ಯ,’ ಎಂದು ಹೇಳಿದರು. 

“ಜೌಗು ಪ್ರದೇಶ ನಿಯಮಗಳ ವ್ಯಾಪ್ತಿಗೆ ಕಾಳೇನ ಅಗ್ರಹಾರ ಕೆರೆಯೂ ಸೇರಿಕೊಂಡಿದ್ದು, ನಿಯಮಗಳ ಪ್ರಕಾರ ಯಾವುದೇ ಕೈಗಾರಿಕೆಗಳ ತ್ಯಾಜ್ಯವನ್ನು ಕೆರೆಗೆ ಹರಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹೀಗಾಗಿ ಕೆರೆಯ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ಹಾಗೂ ಕೈಗಾರಿಕೆಗಳು ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಿ ಶುದ್ಧೀಕರಿಸಿದ ನಂತರ ಕೆರೆಗೆ ನೀರು ಹರಿಸಬೇಕು ಎಂದು ಕಿವಿಮಾತು ಹೇಳಿದರು. 

Advertisement

ಕಾಳೇನ ಅಗ್ರಹಾರ ಕೆರೆ ಅಭಿವೃದ್ಧಿಯಿಂದ ಗೊಟ್ಟಿಗೆರೆ ಕೆರೆಯೂ ಸ್ವತ್ಛವಾಗಲಿದ್ದು, ಅಭಿವೃದ್ಧಿ ಕಾಮಗಾರಿಗಳನ್ನು 2018 ಮಾರ್ಚ್‌ 31ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕೆರೆಯ ಅಭಿವೃದ್ಧಿಯ ನಂತರವೂ ಕೆರೆ ಪರಿಸ್ಥಿತಿಯ ಕುರಿತು ನಿರಂತರವಾಗಿ ಗಮನ ಹರಿಸಲಾಗುವುದು ಮತ್ತು ಪ್ರತಿ ತಿಂಗಳು ಕೆರೆ ನೀರಿನ ಗುಣಮಟ್ಟದ ವರದಿಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು. 

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮಾತನಾಡಿ, ಕೆರೆಯ ಅಭಿವೃದ್ಧಿಗೆ ಕೂಡಲೇ ಟೆಂಡರ್‌ ಕರೆಯಲಾಗುವುದು. ಮೊದಲಿಗೆ ಕೆರೆಯಲ್ಲಿನ ನೀರನ್ನು ಹಂತ ಹಂತವಾಗಿ ಖಾಲಿ ಮಾಡಿ ಹೂಳೆತ್ತುವ ಕಾರ್ಯ ಆರಂಭಿಸಲಾಗುವುದು. ಹೂಳನ್ನು ಸುತ್ತಮುತ್ತಲಿನ ಗ್ರಾಮಗಳ ಕೃಷಿ ಭೂಮಿಗಳಿಗೆ ನೀಡಲಾಗುವುದು. ಕೆರೆಯನ್ನು ಸಂಪೂರ್ಣ ಶುದ್ಧೀಕರಿಸಿದ ನಂತರವೇ ಕೆರೆಯೊಳಗೆ ನೀರು ಸಂಗ್ರಹಣೆಗೆ ಅವಕಾಶ ನೀಡಲಾಗುವುದು ಎಂದರು. 

ಕೆರೆಯ ಸುತ್ತಲೂ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗುವಂತೆ ವಾಕಿಂಗ್‌ ಟ್ರ್ಯಾಕ್‌ ಮತ್ತು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮತ್ತು ಶೌಚಾಲಯ ನಿರ್ಮಿಸಬೇಕು ಎಂದು ಇದೇ ವೇಳೆ ಸಾರ್ವಜನಿಕರು ಸಚಿವರನ್ನು ಒತ್ತಾಯಿಸಿದರು.  ಬಿಬಿಎಂಪಿ ಸದಸ್ಯರಾದ ಆಂಜನಪ್ಪ, ಲಲಿತಾ ಸೇರಿದಂತೆ ವಿವಿಧ ನಾಗರಿಕ ಸಂಘಗಗಳ ಪ್ರತಿನಿಧಿಗಳು ಹಾಜರಿದ್ದರು. 

50 ಕಟ್ಟಡಗಳ ತೆರವು ಸ್ಥಳೀಯರ ಆಕ್ರೋಶ 
ಬೆಂಗಳೂರು:
ಕೆರೆಯನ್ನು ದತ್ತು ಪಡೆದಿರುವ ನಿರ್ಮಲಾ ಸೀತಾರಾಮನ್‌ ಅವರು ಕೆರೆಯ ಅಭಿವೃದ್ಧಿಯ ದೃಷ್ಟಿಯಿಂದ ಸುತ್ತಮುತ್ತಲ ಕಟ್ಟಡಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಅಪಾರ್ಟ್‌ಮೆಂಟ್‌ಗಳೂ ಸೇರಿ ಐವತ್ತು ಕಟ್ಟಡಗಳ ಮಾಲೀಕರಿಗೆ ಸದ್ಯ ತೆರವು ಭೀತಿ ಎದುರಾಗಿದೆ. ಅಭಿವೃದ್ಧಿಯ ಹೆಸರಲ್ಲಿ ನೆಮ್ಮದಿ ಕೆಡಿಸಲು ಬಂದರೆ ಹೋರಾಟ ಮಾಡುವುದಾಗಿಧಿಯೂ ನಿವಾಸಿಗಳು ಎಚ್ಚರಿಸಿದ್ದಾರೆ.  

ಕಟ್ಟಡಗಳನ್ನು ತೆರವು ಮಾಡಿ : ಕೆರೆಯನ್ನು ಪರಿಶೀಲನೆ ನಡೆಸಿದ ಸಚಿವೆ ನಿರ್ಮಲಾ ಸೀತಾರಾಮನ್‌, ಕೆರೆ ಸುತ್ತಲ ಪ್ರದೇಶದಲ್ಲಿ ಅಧಿಕೃತ, ಅನಧಿಕೃತವಾಗಿ ನಿರ್ಮಿಸಿರುವ ಮನೆ, ಅಂಗಡಿ, ಅಪಾರ್ಟ್‌ಮೆಂಟ್‌ಗಳನ್ನು ತನಿಖೆ ನಡೆಸಿ ಕೂಡಲೇ ಕೆರೆಯ ಅಭಿವೃದ್ಧಿ ದೃಷ್ಟಿಯಿಂದಾಗಿ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಕೆರೆಗೆ ತ್ಯಾಜ್ಯ ನೀರು ಹರಿಸದಂತೆ ಮಾಡಿ, ಮಳೆ ನೀರು ಮಾತ್ರ ಸಂಗ್ರಹವಾ ಗುವಂತೆ ನೋಡಿಕೊಳ್ಳಬೇಕು ಎಂದೂ ತಾಕೀತು ಮಾಡಿದರು. 

140 ಮನೆಗಳ ಅಪಾರ್ಟ್‌ಮೆಂಟ್‌ಗೂ ಕುತ್ತು?: ಕಾಳೇನ ಅಗ್ರಹಾರ ಕೆರೆಗೆ ಹೊಂದಿಕೊಂಡಂತಿರುವ ವಿಟೋ ಅಪಾರ್ಟ್‌ ಮೆಂಟ್‌ನ್ನು 2004ಧಿ-05ರಲ್ಲಿಯೇ ಸರ್ಕಾರಿ ಆದೇಶದಂತೆ ಜಾಗ ಪಡೆದು ನಿರ್ಮಿಸಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 140 ಮನೆಗಳಿದ್ದು, ಸುತ್ತಮುತ್ತಲಿನ ಜಾಗದಲ್ಲಿ ನೂರಾರು ಗಿಡಗಳನ್ನು ಬೆಳೆಸಲಾಗಿದೆ. ಹೀಗಾಗಿ ಕೆರೆ ಅಭಿವೃದ್ಧಿ ಎಂದು ತೊಂದರೆ ನೀಡಬೇಡಿ ಎಂದು ಅಪಾರ್ಟ್‌ಮೆಂಟ್‌ ನಿವಾಸಿ ಆಶಾ ನಾಯಕ್‌ ತಿಳಿಸಿದರು. 

ಒಕ್ಕಲೆಬ್ಬಿಸಿದರೆ ಹೋರಾಟ: ನಗರದಲ್ಲಿ ವಿನಾಶದ ಹಂಚಿನಲ್ಲಿರುವ ಹಲವಾರು ಕೆರೆಗಳಿವೆ. ಬೆಳ್ಳಂಧಿದೂರು-ವರ್ತೂರು ಕೆರೆಗಳು ಸಂಪೂರ್ಣವಾಗಿ ಮಲಿನವಾಗಿವೆ. ಅಂತಹ ಕೆರೆಗಳನ್ನು ಅಭಿವೃದ್ಧಿ ಮಾಡುವ ಬದಲಿಗೆ ಅತಿ ಸಣ್ಣ ಕೆರೆ ಅಭಿವೃದ್ಧಿಗೆ ಮುಂದಾಗಿರುವುದು ಸರಿಯಲ್ಲ. ಬಡವರನ್ನು ಒಕ್ಕಲೆಬ್ಬಿಸಲು ಮುಂದಾದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಇಲ್ಲಿನ ನಿವಾಸಿಗಳು ಪಾಲಿಕೆಗೆ ನೀಡಿದ್ದಾರೆ. 

ಕೆರೆಯ ಸುತ್ತಮುತ್ತ ನಿರ್ಮಾಣಗೊಂಡಿರುವ 50 ಮನೆಗಳನ್ನು ಕೆರೆ ಅಭಿವೃದ್ಧಿ ದೃಷ್ಟಿಯಿಂದ ತೆರವುಗೊಳಿಸುವ ವಿಚಾರದ ಕುರಿತು ನಿವಾಸಿಗಳಿಗೆ ಮನವವರಿಕೆ ಮಾಡಿಕೊಡಲಾಗುವುದು. ಜೊತೆಗೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಅದಕ್ಕೆ ನಿವಾಸಿಗಳು ಸ್ಪಂದಿಸದಿದ್ದರೆ ನಂತರ ನೋಟಿಸ್‌ ಜಾರಿಗೊಳಿಸಿ ಕಾನೂನಿನ ಪ್ರಕಾರ ಹೆಜ್ಜೆ ಇಡಲಾಗುವುದು 
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು 

ಕೆರೆ 7.50 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಕೆರೆ ಸುತ್ತ 50ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ. ಕೆರೆ ಅಭಿವೃದ್ಧಿ ದೃಷ್ಟಿಯಿಂದ ಅವುಗಳ ತೆರವು ಅನಿವಾರ್ಯವಾಗಿದೆ. ಮನೆ ಕಳೆದುಕೊಳ್ಳು ವವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸರ್ಕಾರಿ ಜಾಗ ಗುರುತಿಸಿಕೊಡಲಾಗು ವುದು. ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುವುದು 
-ಎಂ.ಕೃಷ್ಣಪ್ಪ, ಸ್ಥಳೀಯ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next