ಮಧ್ಯಪ್ರದೇಶ : ಕೊಚ್ಚೆಯಿಂದ ಮುಚ್ಚಿ ಹೋಗಿದ್ದ ಚರಂಡಿಯನ್ನು ಸ್ವಚ್ಛಗೊಳಿಸುವ ಮೂಲಕ ಮಧ್ಯಪ್ರದೇಶದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗ್ವಾಲಿಯರ್ ನ ಬಿರ್ಲಾ ನಗರದಲ್ಲಿನ ಚರಂಡಿಯಲ್ಲಿ ಹೂಳುತುಂಬಿ ಕೊಳಚೆ ನೀರು ನಿಂತು ದುರ್ನಾತ ಬೀರುತಿತ್ತು ಇದರ ವಿಚಾರವಾಗಿ ಇಲ್ಲಿನ ನಿವಾಸಿಗಳು ಮುನ್ಸಿಪಲ್ ಕಾರ್ಪೋರೇಶನ್ ಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ, ಇದನ್ನು ಅರಿತ ಸಚಿವರು ಸ್ವತಃ ಹಾರೆ ಹಿಡಿದು ಕೊಚ್ಚೆ ನೀರಿನಿಂದ ತುಂಬಿದ ಚರಂಡಿಗೆ ಇಳಿದು ಮಣ್ಣನು ತೆಗೆದು ಚರಂಡಿ ನೀರು ಹೋಗಲು ವ್ಯವಸ್ಥೆ ಮಾಡಿದರು.
ಸಚಿವರು ಚರಂಡಿ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಚಾರ ತಿಳಿಯುತ್ತಿದ್ದಂತೆ ಗ್ವಾಲಿಯರ್ ಮುನ್ಸಿಪಲ್ ಕಾರ್ಪೋರೇಶನ್ ಆಯುಕ್ತ ಸಂದೀಪ್ ಮಕಿನ್ ಬಿರ್ಲಾ ನಗರಕ್ಕೆ ಭೇಟಿ ನೀಡಿ ಅವ್ಯವಸ್ಥೆಗೆ ಕಾರಣರಾದ ಮೂವರು ಅಧಿಕಾರಿಗಳನ್ನು ವಜಾಗೊಳಿಸಿದರು.
ಈ ವಿಚಾರವಾಗಿ ಮಾತನಾಡಿದ ತೋಮರ್, ಬಿರ್ಲಾನಗರದ ನ್ಯೂ ಕಾಲೋನಿಯ ಮಹಿಳೆಯರು ಚರಂಡಿಯ ಅವ್ಯವಸ್ಥೆಯ ಬಗ್ಗೆ ನನಗೆ ದೂರು ನೀಡಿದ್ದರು. ನಿಗಮದ ನೌಕರರು ಶುಚಿಗೊಳಿಸುವ ಕೆಲಸಕ್ಕೆ ಬಾರದಿದ್ದ ಕಾರಣ ನಾನೆ ಚರಂಡಿಗೆ ಇಳಿದೆ. ಈ ಅವ್ಯವಸ್ಥೆಯಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಜನರ ಸಂಕಟವನ್ನು ನಾನು ನೋಡಲಾರೆ ಎಂದು ಪ್ರತಿಕ್ರೀಯಿಸಿದರು.
ಏನೇ ಆಗಲಿ ಸಚಿವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.