ಮಾದನ ಹಿಪ್ಪರಗಿ: ರಾಜ್ಯದ ಶಿಕ್ಷಣ ಖಾತೆ ಸಚಿವ ಸ.ರಾ. ಮಹೇಶ ಮತ್ತು ಬೀದರ ಸಂಸದ ಭಗತ್‌ಸಿಂಗ್ ಖೂಬಾ!
ಹೌದು, ಮಾದನ ಹಿಪ್ಪರಗಿ ಹೊಸಬಡಾವಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣೆಯೊಂದಲ್ಲಿರುವ ಫಲಕದಲ್ಲಿರುವ ಮಾಹಿತಿ ಇದು.
ಮಕ್ಕಳ ಜ್ಞಾನಕ್ಕಾಗಿ ಶಾಲೆ ಕೋಣೆಯೊಂದರ ಫಲಕದಲ್ಲಿ ಜನಪ್ರತಿನಿಧಿಗಳು ಮತ್ತು ಅವರ ಹುದ್ದೆ ಬರೆಸಲಾಗಿದೆ.
ಆದರೆ ಅದರಲ್ಲಿ ಎರಡೂಮೂರು ತಪ್ಪುಗಳು ಇದ್ದರು ಸಹ ಶಿಕ್ಷಕರು ಗಮನಿಸಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಪ್ರಧಾಮಂತ್ರಿಗಳು ನರೇಂದ್ರ ಮೋದಿ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಮಾನವ ಸಂಪನ್ಮೂಲ ಮಂತ್ರಿಗಳು ಎಂದು ಬರೆಯಲಾಗಿದೆ. ಆದರೆ ಸಚಿವರ ಹೆಸರನ್ನು ಮಾತ್ರ ಬರೆಯದೆ ಖಾಲಿ ಬಿಡಲಾಗಿದೆ. ರಾಜ್ಯಪಾಲರ ಎಂಬಲ್ಲಿ ವಿ.ಆರ್. ವಾಲಾ, ಮುಖ್ಯಮಂತ್ರಿಗಳು ಎಂಬಲ್ಲಿ ಕುಮಾರಸ್ವಾಮಿ, ಶಿಕ್ಷಣ ಸಚಿವರು ಎಂಬಲ್ಲಿ ಸ.ರಾ. ಮಹೇಶ ಮತ್ತು ಲೋಕಸಭಾ ಸದಸ್ಯರು ಎಂಬಲ್ಲಿ ಭಗತ್‌ಸಿಂಗ್ ಖೂಬಾ ಎಂದು ಬರೆಯಲಾಗಿದೆ.
ಶಾಸಕರ ಹೆಸರನ್ನು ಸುಭಾಷ ಗುತ್ತೇದಾರ ಮತ್ತು ಜಿಪಂ ಸದಸ್ಯರ ಹೆಸರನ್ನು ಗುರುಶಾಂತ ಪಾಟೀಲ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಜಿಪಂ ಅಧ್ಯಕ್ಷರ ಹೆಸರನ್ನು ಸುವರ್ಣಾ ಮಾಲಾಜಿ ಎಂದು ಬರೆಯುವ ಬದಲು ಸೂವರ್ಣಾ ಮಾಲಾಜಿ ಎಂದು ಬರೆಯಲಾಗಿದೆ.
ರಾಜ್ಯದ ಶಿಕ್ಷಣ ಖಾತೆ ಸಚಿವರ ಹೆಸರು ಎನ್. ಮಹೇಶ ಮತ್ತು ಬೀದರ ಲೋಕಸಭಾ ಸದಸ್ಯರ ಹೆಸರು ಭಗವಂತ ಖೂಬಾ ಬರೆಯಬೇಕಾಗಿತ್ತು. ಆದರೆ ನೂರಾರು ಮಕ್ಕಳ ಮನಸ್ಸಿನಲ್ಲಿ ಸ.ರಾ. ಮಹೇಶ ಮತ್ತು ಭಗತ್‌ಸಿಂಗ್ ಖೂಬಾ ಎಂದೇ ಅಚ್ಚೊತ್ತಿದಂತಾಗಿದೆ.