ದಾವಣಗೆರೆ: ಬಿಜೆಪಿಯವರೇ ಆಗಲಿ ಯಾರೇ ಆಗಲಿ ಡ್ರಗ್ ದಂಧೆಯಲ್ಲಿ ತೊಡಗಿದ್ದು ಕಂಡು ಬಂದರೆ ಸೂಕ್ತ ಕ್ರಮ ತೆಗದುಕೊಳ್ಳುವುದಕ್ಕೆ ಸರ್ಕಾರ ಬದ್ಧ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳು ಇದ್ದಾರೆ ಎಂಬುದು ನಮಗಿಂತಲೂ ಮಾಧ್ಯಮದವರಿಗೆ ಹೆಚ್ಚಿನ ರೀತಿ ಗೊತ್ತಿದೆ. ತಡೆಗೆ ನೀವು ಮಾಧ್ಯಮದವರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಡ್ರಗ್ ಬರೀ ದಂಧೆ ಅಲ್ಲ. ಅದೊಂದು ಮಾಫಿಯಾ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ನಮ್ಮ ಸರ್ಕಾರ ಪೊಲೀಸರಿಗೆ ನೀಡಿದಷ್ಟು ಮುಕ್ತ ಅಧಿಕಾರ ಬೇರೆ ಯಾವ ಸರ್ಕಾರ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆ.ಆರ್. ಪೇಟೆ ಉಪ ಚುನಾವಣೆ ಪ್ರಚಾರಕ್ಕೆ ನಟಿ ರಾಗಿಣಿಯನ್ನು ಪಕ್ಷ ಹೋಗಿ ಕರೆದಿಲ್ಲ. ಕೆ.ಆರ್. ಪೇಟೆಯ ಅವರಿಗೆ ಬೇಕಾದವರು ಕರೆದಿದ್ದಕ್ಕೆ ಬಂದಿದ್ದರು. ವಿಜಯೇಂದ್ರ ಉಪ ಚುನಾವಣೆ ನೇತೃತ್ವ ವಹಿಸಿದ್ದರು. ಬಿಜೆಪಿ, ವಿಜಯೇಂದ್ರ, ರಾಗಿಣಿಗೆ ಯಾವುದೇ ಸಂಬಂಧ ಇಲ್ಲ ಎಂದರು.
ಇದನ್ನೂ ಓದಿ: ಭಾರತೀಯ ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ, ಬಾನಂಗಳದಲ್ಲಿ ಶಕ್ತಿಪ್ರದರ್ಶನ
ವಿಜಯೇಂದ್ರ ಜೊತೆಗೆ ರಾಗಿಣಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ವಿರೋಧ ಪಕ್ಷದವರು ಆ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜೊತೆ ಅನೇಕರ ಫೋಟೋ ಇವೆ. ಅವುಗಳನ್ನು ಯಾಕೆ ಅಪ್ ಲೋಡ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮಳೆಯಿಂದ ಹಾಳಾಗಿರುವ ತರಕಾರಿ, ಹೂವು, ಹಣ್ಣು ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ. ಕೆಲವು ಕಡೆ ತಾಂತ್ರಿಕ ಕಾರಣಗಳಿಂದ ಬಿಡುಗಡೆ ಆಗಿಲ್ಲ. ಬೆಳೆ ವಿಮೆ ರೈತರಿಗೆ ಬಹಳ ಅನುಕೂಲ ಎಂದರು.