Advertisement

ಆಸ್ಪತ್ರೆಗಳ ಉನ್ನತೀಕರಣಕ್ಕೆ ಗಮನ: ಡಾ. ನಾರಾಯಣ ಗೌಡ ಭರವಸೆ

06:48 PM Aug 15, 2022 | Suhan S |

ಸಾಗರ: ಉಪವಿಭಾಗೀಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಗಮನ ಹರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ತಿಳಿಸಿದರು.

Advertisement

ಇಲ್ಲಿನ ಉಪವಿಭಾಗೀಯ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಮಂಗಳವಾರ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಶಾಸಕ ಹಾಲಪ್ಪ ಸೇರಿದಂತೆ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಸಭೆ ನಡೆಸಿ ಸಾಗರ ಆಸ್ಪತ್ರೆಯನ್ನು 250 ಹಾಸಿಗೆ ಸಾಮರ್ಥ್ಯಕ್ಕೆ, ತಾಯಿಮಗು ಆಸ್ಪತ್ರೆಯನ್ನು 150 ಹಾಸಿಗೆ ಸಾಮರ್ಥ್ಯಕ್ಕೆ ಏರಿಸುವುದು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.

ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಜಿಲ್ಲೆಯಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಹ ರೋಗಿಗಳು ತಪಾಸಣೆಗೆ ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಗಳ ಉತ್ತಮ ಸೇವೆಯೇ ಇದಕ್ಕೆ ಕಾರಣವಾಗಿದೆ. ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ನಾಲ್ಕೈದು ಡಯಾಲಿಸಿಸ್ ಯಂತ್ರ ಇರುತ್ತದೆ. ಇಲ್ಲಿ 9 ಡಯಾಲಿಸಿಸ್ ಯಂತ್ರವಿದ್ದು, ಹೆಚ್ಚುವರಿ ಡಯಾಲಿಸಿಸ್ ಯಂತ್ರದ ಬೇಡಿಕೆ ಈಡೇರಿಸಲಾಗುತ್ತದೆ. ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರತೆ ಇರುವ ವೈದ್ಯರನ್ನು ಭರ್ತಿ ಮಾಡಲು ಚಿಂತನೆ ನಡೆಸಲಾಗಿದ್ದು ಮೆಡಿಕಲ್ ಕಾಲೇಜು, ಎಂಡಿ ಮಾಡಿರುವವರು ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಬೇಕು ಎಂದು ನಿಯಮ ರೂಪಿಸಿದ್ದರಿಂದ ಶೀಘ್ರದಲ್ಲೇ ವೈದ್ಯರ ಕೊರತೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪಥ್ಯಾಹಾರ ಟೆಂಡರ್ ಲೋಪದ ಬಗ್ಗೆ ಸಹ ಬೆಂಗಳೂರಿನ ಸಭೆಯಲ್ಲಿ ಆರೋಗ್ಯ ಸಚಿವರ ಗಮನ ಸೆಳೆಯಲಾಗುತ್ತದೆ ಎಂದು ಹೇಳಿದರು.

ಶಾಸಕ ಹಾಲಪ್ಪ ಹರತಾಳು ಮಾತನಾಡಿ, ತಾಯಿಮಗು ಆಸ್ಪತ್ರೆಯಲ್ಲೇ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇರುವುದರಿಂದ ಹೆರಿಗೆಯಾದವರಿಗೆ ಮಲಗಲು ಸ್ಥಳ ಇಲ್ಲದಂತೆ ಆಗಿದೆ. ಕಚೇರಿಯನ್ನು ಬೇರೆ ಕಡೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಸಹಾಯಕ ಆಯುಕ್ತೆ ಪಲ್ಲವಿ ಸಾತೇನಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಸಿವಿಲ್ ಸರ್ಜನ್ ಡಾ. ಪರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್., ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಆರೋಗ್ಯ ರಕ್ಷಾ ಸಮಿತಿಯ ಕೃಷ್ಣ ಆರ್. ಶೇಟ್, ವಿನೋದ್ ರಾಜ್ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next