Advertisement

ಕುಲುವನಹಳ್ಳಿ ಶಾಲೆಗೆ ಸಚಿವ ನಾಗೇಶ್‌ ದಿಢೀರ್‌ ಭೇಟಿ

01:06 PM Aug 27, 2022 | Team Udayavani |

ನೆಲಮಂಗಲ: ತಾಲೂಕಿನ ಕುಲುವನಹಳ್ಳಿ ಸುಧಾನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅನಿರೀಕ್ಷಿತವಾಗಿ ಶುಕ್ರವಾರ ಧಿಡೀರ್‌ ಭೇಟಿ ನೀಡಿದರು.

Advertisement

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಸುಧಾನಗರದಲ್ಲಿರುವ ಶಾಲೆಗೆ ಶುಕ್ರವಾರ ಬೆಳಗ್ಗೆ 9.45ಕ್ಕೆ  ಭೇಟಿ ನೀಡಿದ ಸಚಿವರು, ಪ್ರತಿಯೊಂದು ತರಗತಿಗೆ ತೆರಳಿ ಮಕ್ಕಳ ಹಾಜರಾತಿ ಮತ್ತು ಶಿಕ್ಷಕರ ಸಮಯಪಾಲನೆ ಗಮನಿಸಿದರು.

ಶಾಲೆಯ ಭೇಟಿ ಬಳಿಕ ಉದಯವಾಣಿಯೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು, ಶಾಲಾ ಶಿಕ್ಷಕರ ಹಾಜರಾತಿಯ ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಹೀಗಾಗಿ ಬಿಇಒ, ಡಿಡಿಪಿಐ ಸೇರಿದಂತೆ ಇಲಾಖೆಯ ಶಿಕ್ಷಕೇತರ ಸಿಬ್ಬಂದಿಯನ್ನು ತೊಡಗಿಸಲಾಗುತ್ತಿದೆ. ಶಿಕ್ಷಣದ ಗುಣಮಟ್ಟದ ಹಿತದೃಷ್ಟಿಯಿಂದ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.

ಶಾಲೆ ಪರಿಸರ ಉತ್ತಮವಾಗಿದೆ: ಶಾಲೆಯ ಪರಿಸರ ಉತ್ತಮವಾಗಿದೆ. ಮಕ್ಕಳು ಪ್ರತಿಭಾವಂತರಿದ್ದಾರೆ. ಹಾಜರಾತಿ ಸಹ ಉತ್ತಮವಾಗಿದೆ. ಒಂದು ತರಗತಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿತ್ತು. ಶಿಕ್ಷಕರು ಇನ್ನಷ್ಟು ಕಾರ್ಯನ್ಮೋಖರಾಗಬೇಕು. ಹಾಜರಾತಿ ಗಮನಿಸ ಬೇಕು. ಯಾವುದೇ ಸಬೂಬು ನಾನು ಕೇಳುವುದಿಲ್ಲ. ಕ್ರೀಯಾಶೀಲರಾಗಿ ಕೆಲಸ ಮತ್ತು ಸಮಯಪಾಲನೆ ಮಾಡಬೇಕು ಎಂದು ಸ್ಥಳದಲ್ಲೇ ಎಚ್ಚರಿಕೆ ನೀಡಿದರು.

ಶಿಕ್ಷಕರಿಗೆ ಸಂತಸ ಮತ್ತು ಭಯ: ಶಿಕ್ಷಣ ಸಚಿವರು ಏಕಾಏಕಿ, ಯಾವುದೇ ಅಧಿಕಾರಿಗಳಿಲ್ಲದೇ, ತಮ್ಮ ಆಪ್ತ ಸಹಾಯಕರೊಂದಿಗೆ ಒಬ್ಬರೇ ದಿಢೀರ್‌ ಭೇಟಿ ನೀಡಿದ ತಕ್ಷಣ ನಮಗೆ ಭಯದ ಜೊತೆ ನಮ್ಮ ಶಾಲೆಗೆ ಸಚಿವರೇ ಆಗಮಿಸಿದರು ಎಂಬ ಸಂತಸವು ಇತ್ತು. ಮುಖ್ಯಶಿಕ್ಷಕ ಉತ್ತರೇಗೌಡ ವಿವರಿಸಿದರು. ಸಚಿವರ ದಿಢೀರ್‌ ಭೇಟಿ, ಶಿಕ್ಷಕರಿಗೆ ಸಮಯಪಾಲನೆ ಅರಿವು ಇನ್ನಷ್ಟು ಹೆಚ್ಚಾಗಲಿದೆ. ಈಗಾಗಲೇ ನಾನು ಸೇರಿದಂತೆ ಅಧಿಕಾರಿ ವರ್ಗ ತಾಲೂಕಿನಲ್ಲಿ ದಿಢೀರ್‌ ಮತ್ತು ಅನಿರೀಕ್ಷಿತ ಭೇಟಿ ನೀಡುತ್ತಿದ್ದೇವೆ. 25 ಶಾಲೆಗಳಿಗೆ ಭೇಟಿ ವರದಿ ಸಹ ಇದೆ. ಎಲ್ಲಾ ಶಾಲೆಗಳಿಗೆ ಮತ್ತೂಮ್ಮೆ ನೋಟಿಸ್‌ ಜಾರಿ ಮಾಡಿ ಸಮಯಪಾಲನೆ ಮತ್ತು ಹಾಜರಾತಿ ಕಟ್ಟುನಿಟ್ಟು ಮಾಡಿ, ಎನ್‌ಇಪಿಯ ಮೂಲ ಪರಿಕಲ್ಪನೆಯಾದ ಕಲಿಕೆಯ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಕ್ಕೆ ಒತ್ತು ನೀಡುತ್ತೇವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮ ಯ್ಯ ತಿಳಿಸಿದರು.

Advertisement

ಸ್ವಾಗತಾರ್ಹ ಕ್ರಮ: ಇತ್ತಿಚೇಗೆ ಮಂಡ್ಯ, ಚಾಮರಾಜನಗರ ಜಿಲ್ಲೆಯ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿದ ಸಚಿವರು, ನೆಲಮಂಗಲ ತಾಲೂಕಿನ ಶಾಲೆಗೆ ಭೇಟಿ ನೀಡಿದ್ದು ಸ್ವಾಗತಾರ್ಹ ಕ್ರಮ. ಶಿಕ್ಷಕರಲ್ಲಿ ಅರಿವು ಮೂಡಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರುದ್ರಾರಾಧ್ಯ ಹಾಗೂ ನೌಕರರ ಸಂಘದ ವಾಸುದೇವಮೂರ್ತಿ ಸ್ವಾಗತಿಸಿದ್ದಾರೆ.

ಪ್ರಾಥಮಿಕ ಶಾಲೆ ಸಹಶಿಕ್ಷಕಿ ಪರಿಮಳ, ಸುಧಾಮನಗರ ಗ್ರಾಮಸ್ಥ ಪ್ರಕಾಶ್‌ ಗೌಡ ಮಾತನಾಡಿದರು. ಈ ವೇಳೆಯಲ್ಲಿ ಗ್ರಾಮಸ್ಥ ಪ್ರಕಾಶ್‌, ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next