ಕೆ.ಆರ್.ಪೇಟೆ: ಮಾಗಡಿ-ಸೋಮವಾರಪೇಟೆ ಜಲಸೂರು ಹೆದ್ದಾರಿಯ ಮಂಡ್ಯ ಜಿಲ್ಲಾ ವ್ಯಾಪ್ತಿಯ ರಸ್ತೆ ಕಾಮಗಾರಿಯನ್ನು ಮುಂದಿನ 6 ತಿಂಗಳೊಳಗೆ ಪೂರ್ಣಗೊಳಿಸುವಂತೆ ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕೆಶಿಪ್ ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರಿಗೆ ಸೂಚನೆ ನೀಡಿದರು.
ನಾಗಮಂಗಲ ಕ್ಷೇತ್ರದ ಕೌಡ್ಲೆ ಗೇಟ್ ನಿಂದ ನಾಗಮಂಗಲ ಬೋಗಾದಿ ಮಾರ್ಗವಾಗಿ ಕೆ.ಆರ್. ಪೇಟೆ ವರಗೆ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವರು ಕೆಶಿಪ್ ಎಂಜಿನಿಯರ್‌ಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು.
ಸಮಸ್ಯೆ ಇಲ್ಲದ ಪ್ರದೇಶದಲ್ಲಿ ಕಾಮಗಾರಿ: 2018 ರಲ್ಲಿ ರಸ್ತೆ ಕಾಮಗಾರಿಗೆ ಅನುಮೋದನೆ ದೊರಕಿದ್ದು, 2020ರಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಕಳೆದ 3 ವರ್ಷಗಳಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲದ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. ಕೋವಿಡ್ ಸಂದರ್ಭದ ಸಮಸ್ಯೆಗಳು, ಅಧಿಕಾರಿಗಳ ಬದಲಾವಣೆ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಸೇರಿದಂತೆ ಅರಣ್ಯ ಇಲಾಖೆಗೆ ಸೇರಿದ ಸ್ಥಳದಿಂದ ಕೆಲವು ಭಾಗಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ: ಮಂಡ್ಯ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿಗೆ 63 ಎಕರೆ ಅರಣ್ಯ ಭೂಮಿ ಬಳಕೆಯಾಗಲಿದ್ದು ಫಾರೆಸ್ಟ್ ಕ್ಲಿಯರೆನ್ಸ್ ಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಈ ಜಮೀನಿನ ಬದಲಿಗೆ 126 ಎಕರೆ ಬದಲಿ ಸರ್ಕಾರಿ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟು ಕೊಡಲು ಈಗಾಗಲೇ ಜಾಗ ಗುರುತಿಸಲಾಗಿದೆ. ಕೇಂದ್ರದ ಅನುಮೋದನೆಯೊಂದು ಬಾಕಿ ಇದೆ. ಇದಲ್ಲದೆ ಜಿಲ್ಲೆಯ 8 ಕಡೆ ತಾಂತ್ರಿಕ ಸಮಸ್ಯೆಗಳಿಂದ ಕೆಲಸ ವಿಳಂಬವಾಗಿದ್ದು ಆದಷ್ಟು ಶೀಘ್ರ ಬಗೆಹರಿಯಲಿದೆ ಎಂದು ಹೇಳಿದರು.
ನಾಗಮಂಗಲ ಬಳಿ ಜವಳಿಪಾರ್ಕ್‌ಗೆ 6ಎಕರೆ ಹಾಗೂ ಗಾರ್ಮೆಂಟ್ಸ್ ಉದ್ದಿಮೆಗೆ 4 ಎಕರೆ ಜಾಗ ಗುರುತಿಸಲು ಸೂಚಿಸಲಾಗಿದೆ ಈಗಾಗಲೇ ಅಧಿಕಾರಿಗಳು ಕ್ರಮ ವಹಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಎಲ್ಲರ ಅಹವಾಲು ಆಲಿಸಿದ ಸಚಿವರು: ಹೆದ್ದಾರಿ ಕಾಮಗಾರಿ ಪರಿಶೀಲನೆಗೆ ಕೌಡ್ಲೆ ಗೇಟ್ ನಿಂದ ಕೆ.ಅರ್ ಪೇಟೆವರೆಗೆ ಆಗಮಿಸಿದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವ ರಾಯಸ್ವಾಮಿ ಅವರನ್ನು ಆತ್ಮೀಯವಾಗಿ ಸ್ವಾಗತಿಸ ಲಾಯಿತು. ಪ್ರತಿ ಗ್ರಾಮದಲ್ಲೂ ಸಾರ್ವಜನಿಕರು ಗುಂಪು ಗುಂಪಾಗಿ ಸಚಿವರನ್ನು ಬರಮಾಡಿಕೊಂಡು ಹರ್ಷ ವ್ಯಕ್ತಪಡಿಸಿದರು. ಜೊತೆಗೆ ತಮ್ಮೂರ ಅಹವಾಲುಗಳನ್ನು ಹೇಳಿಕೊಂಡರು. ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಸಚಿವರು ಸಾಧ್ಯವಾದಷ್ಟು ಪ್ರಕರಣ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಬಗೆಹರಿಸಿದರು.
ರಸ್ತೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ವ್ಯಾಪ್ತಿಯ ಸಮಸ್ಯೆಗಳಿದ್ದಲ್ಲಿ ಡೀಸಿ ಹಂತದಲ್ಲಿ ಸಭೆ ನಡೆಸಿ ಪರಿಹರಿಸಲಾಗುವುದು ಎಂದು ಹೇಳಿದರು.
ಡೀಸಿ ಡಾ.ಕುಮಾರ, ಪಾಂಡವಪುರ ಉಪವಿ ಭಾಗಾಧಿಕಾರಿ ನಂದೀಶ್, ಕೆಶಿಪ್ ಚೀಫ್ ಎಂಜಿನಿಯರ್ ಶಿವ ಕುಮಾರ್, ತಹಶೀಲ್ದಾರ್ ನಿಸರ್ಗ ಪ್ರಿಯಾ, ಚಂದ್ರಶೇಖರ್, ದೇವರಾಜು ಇದ್ದರು.