ಬೆಳಗಾವಿ: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿಯಲ್ಲಿರುವ ಮೃತನ ಮನೆಗೆ ಸಚಿವ ಮುರುಗೇಶ ನಿರಾಣಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಸಮರ್ಥ ಕಾಲೋನಿಯ ನಿವಾಸಿ ಸಂತೋಷ ಪಾಟೀಲ ಮನೆಗೆ ಭೇಟಿ ನೀಡಿದ ಸಚಿವರು, ಸಂತೋಷ ಕುಟುಂಬಸ್ಥರಿಗೆ ಮತ್ತು ಪತ್ನಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ನಿಮ್ಮ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಸರ್ಕಾರದಿಂದ ಆದಷ್ಟು ಸಹಾಯವನ್ನು ಕುಟುಂಬಕ್ಕೆ ಮಾಡುತ್ತೇವೆ. ಸಂತೋಷ್ ಪತ್ನಿಗೆ ಯಾವುದಾದರೂ ಒಂದು ಸರ್ಕಾರಿ ನೌಕರಿಯನ್ನು ಕೊಡಿಸುವಂತೆ ಸಿಎಂ ಬೊಮ್ಮಾಯಿಯವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಮಂಗಳೂರು: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ಎಸ್.ಡಿ.ಪಿ.ಐ
ಬೆಳಗಾವಿ ಮೂಲದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಎನ್ನಲಾದ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಮಂಗಳವಾರ ನಿಗೂಢವಾಗಿ ಸಾವನ್ನಪ್ಪಿದ್ದರು.
“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ” ಎಂದು ಬರೆದಿರುವ “ಡೆತ್ ನೋಟ್’ ಒಂದು ವೈರಲ್ ಆಗುವುದರೊಂದಿಗೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಸಂತೋಷ್ ಅವರು ಸಚಿವ ಈಶ್ವರಪ್ಪ ವಿರುದ್ಧ ಶೇ. 40 ಕಮಿಷನ್ ಆರೋಪ ಮಾಡಿದ್ದರು.