ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಮಠದ ಹಿರಿಯ ಶ್ರೀಗಳಾದ ಲಿ.ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನುಡಿದರು.
ಕಾನೂನು ಕ್ರಮಕ್ಕೆ ಸೂಚನೆ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿವೆ. ಯಾರು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸೂಚನೆ ನೀಡಿದ್ದೇನೆ: ಜಿಲೆಟಿನ್ ಕಡ್ಡಿಗಳ ಸ್ಫೋಟ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗದಲ್ಲಿ ನಡೆದ ಈ ಘಟನೆ ನಂತರ ಕೆಲವು ಕಡೆ ಆಗಿದೆ. ಈ ಬಗ್ಗೆ ಹೆಚ್ಚು ಜಾಗೃತಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೆಲೆಟಿನ್ ಸಂಗ್ರಹಿಸುವುದು, ಸಾಗಾಟ ಮತ್ತು ಅದರ ಬಳಕೆ ಬಗ್ಗೆ ನಿಗಾವಹಿಸಿ ಈ ರೀತಿ ಆಗದಂತೆ ಗಮನ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮರಳು ಸಮಸ್ಯೆ ತಪ್ಪಿಸಲು ಕ್ರಮ: ಗ್ರಾಮೀಣ ಪ್ರದೇಶದಲ್ಲಿ ಇರುವ ಮರಳು ಸಮಸ್ಯೆ ತಪ್ಪಿಸಲು ಸಗ್ರಾಪಂ ಪ್ರದೇಶದಲ್ಲಿ ಆಕ್ಷನ್ ಆಗದೇ ಸಿಗುವ ಮರಳನ್ನು ಸ್ಥಳೀಯರು ತಮ್ಮ ಗಾಡಿಗಳಲ್ಲಿ ಅಥವಾ ಟ್ರ್ಯಾಕ್ಟರ್‌ಗಳಲ್ಲಿ ತಂದು ತಮ್ಮ ಸ್ವಂತಕ್ಕೆ ಮನೆ ಕಟ್ಟಿಕೊಳ್ಳಲು ಇತರೆ ಉಪಯೋಗಿಸಿಕೊಳ್ಳಲು ಅನುವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಆದರೆ, ಮರಳನ್ನು ಸಂಗ್ರಹಿಸಿ ಬೇರೆ ಕಡೆ ಸಾಗಿಸಿದರೆ ಅಂತಹವರ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗುವುದು ಎಂದರು.
ಇದನ್ನೂ ಓದಿ :ಹಾಲು ಖರೀದಿ ದರದಲಿ 2 ರೂ.ಹೆಚ್ಚಳ
ವಿಶ್ವಕ್ಕೇ ಮಾದರಿ ಕ್ಷೇತ್ರ: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠ ವಿಶ್ವಕ್ಕೇ ಮಾದರಿಯಾಗಿರುವ ಕ್ಷೇತ್ರವಾಗಿದೆ. ಮಠದ ಹಿರಿಯ ಶ್ರೀಗಳಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರು ಬಡಮಕ್ಕಳಿಗೆ ಅನ್ನ, ಆಶ್ರಯ ಶಿಕ್ಷಣ ನೀಡಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿಶ್ವದ ಎಲ್ಲಾ ಕಡೆ ಇದ್ದಾರೆ. ಶ್ರೀ ಮಠದ ಸೇವೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರು. ಈ ವೇಳೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ ಇದ್ದರು.