ಬೀಳಗಿ: ಕೃಷ್ಣಾ ಮೆಲ್ದಂಡೆ ಯೋಜನೆ 3ನೇ ಹಂತದ ಉಳಿದ ಎಲ್ಲ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಬಿಜೆಪಿ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಈಗಾಗಲೇ ಹಲವು ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾದಂತಹ ಮಹಾಮಾರಿ ಆವರಿಸಿ ಸರ್ಕಾರದ ಆದಾಯದ ಕೊರತೆಯಿಂದ ಹಲವಾರು ಅಭಿವೃದ್ಧಿ ಯೋಜನೆ ಮಾಡಲು ಆಗಿಲ್ಲ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಅತಿ ಹೆಚ್ಚು ಕಾಳಜಿ ವಹಿಸಿ ಅಗತ್ಯವಿರುವ ಎಲ್ಲ ಯೋಜನೆ ಜಾರಿಗೊಳಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಅಭಿವೃದ್ಧಿ ವಿಷಯಗಳಲ್ಲಿ ರಾಜ್ಯ ಸರ್ಕಾರ ತನ್ನದೆಯಾದ ಕ್ರಮ ತೆಗೆದುಕೊಳ್ಳುತ್ತಿದೆ. ಬರುವ ದಿನಗಳಲ್ಲಿ ಕೃಷ್ಣಾ ಮೆಲ್ದಂಡೆ ಯೋಜನೆ ಪೂರ್ಣಗೊಳಿಸುಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಕುರಿತು ಜಲ ಸಂಪನ್ಮೂಲ ಸಚಿವ ಕಾರಜೋಳ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಲವಾರು ಸಭೆ-ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದರು.
ವಿಧಾನಪರಿಷತ್ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ನಾಯಕರು, ವಿಧಾನಪರಿಷತ್ ಸದಸ್ಯರು, ಶಾಸಕರು, ಕೆಲ ನಾಯಕರು ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಅಲ್ಲದೇ ಕೆಲವರು ರೈತರಿಂದ ಕಡಿಮೆ ಬೆಲೆಯಲ್ಲಿ ಭೂಮಿ ಖರೀದಿಸಿ ಅದನ್ನು ಸರ್ಕಾರಕ್ಕೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಲಾಭ ಪಡೆಯುವ ನಿಟ್ಟಿನಲ್ಲಿ ಮುಳುಗಡೆ ಯೋಜನೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಎಲ್ಲ ವಿಷಯ ಜನರಿಗೂ ಗೊತ್ತಿದೆ. ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆ ಮಾಡಿ ಸರ್ಕಾರದಲ್ಲಿದ್ದು ಏನು ಮಾಡಿದ್ದೀರಿ ಎನ್ನುವುದನ್ನು ಜತೆಗೆ ಸದ್ಯದ ಪಾದಯಾತ್ರೆ ನೇತೃತ್ವ ವಹಿಸಿದವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಈ ಯೋಜನೆಗಾಗಿ ಏನು ಮಾಡಿದ್ದಾರೆ. ಅಂದು ಸಹಿತ ಗಾಂಧಿ ಜಯಂತಿ ಬಂದಿತ್ತು. ಆಗ ಏಕೆ ಪಾದಯಾತ್ರೆ ಮಾಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಐದು ವರ್ಷ ನಿಮ್ಮದೆ ಸರ್ಕಾರವಿದ್ದಾಗ ಏನು ಮಾಡದೆ ಇಂದು ಸ್ವಾರ್ಥಕ್ಕಾಗಿ ಚುನಾವಣೆ ಮುಂದೆ ಇಟ್ಟುಕೊಂಡು ಸಂತ್ರಸ್ತರ ಹೆಸರಿನಲ್ಲಿ ಪಾದಯಾತ್ರೆ ಮಾಡುವುದು ಎಷ್ಟು ಸರಿ. ನಾವು ರಾಜಕಾರಣ ಮಾಡುವುದಿಲ್ಲ. ಆದರೆ ಕೃಷ್ಣೆಯ ವಿಚಾರವಾಗಿ ಎಲ್ಲ ಕೆಲಸಗಳನ್ನು ಮಾಡುವುದಕ್ಕೆ ಸಿದ್ಧರಿದ್ದೇವೆ. ಪುನರ್ವಸತಿ ಕೇಂದ್ರಗಳು ಸೇರಿದಂತೆ ಯೋಜನೆಗೆ ಬರುವ ಎಲ್ಲ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದಿ ಹೇಳಿದರು.