Advertisement
ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ ಗುರುವಾರ ಆಯೋಜಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಕೈಗಾರಿಕೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಮುಖವಾಗಿ ಕೈಗಾರಿಕೆಗಳಿಂದ ವಸೂಲಿ ಮಾಡುವ ಆಸ್ತಿ ತೆರಿಗೆಯಲ್ಲಿ ಶೇ.70 ಪ್ರಮಾಣವನ್ನು ಆಯಾ ಕೈಗಾರಿಕಾ ಪ್ರದೇಶದ ಸಂಘಕ್ಕೆ ನೀಡಲಾಗುವುದು. ಉಳಿದ ಶೇ.30ನ್ನು ಗ್ರಾಮ ಪಂಚಾಯಿತಿ ಸೇರಿ ಇನ್ನಿತರ ಸ್ಥಳೀಯ ಆಡಳಿತಗಳಿಗೆ ಕೊಡಲಾಗುವುದು. ಅದರ ಜತೆಗೆ ರೋಗಗ್ರಸ್ತ ಹಳೇ ಕೈಗಾರಿಕೆಗಳ ಪುನಶ್ಚೇತನಕ್ಕೆ ಹೊಸ ನಿಯಮ ಜಾರಿಗೆ ತರಲಾಗಿದೆ. ಆ ಕೈಗಾರಿಕೆಗಳಿಗೆ ಸೇಲ್ ಡೀಡ್ ಮಾಡಿಕೊಡಲು ನಿರ್ಧರಿಸಲಾಗಿದೆ. ಹೀಗೆ ಸೇಲ್ ಡೀಡ್ ಪಡೆಯುವ ಕೈಗಾರಿಕೆಗಳು ಹಿಂದಿನಂತೆಯೇ ತನ್ನ ಉತ್ಪಾದನೆಯನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದರು.
Related Articles
ಸಂವಾದದಲ್ಲಿ ಕೈಗಾರಿಕೋದ್ಯಮಿಗಳು ಸಚಿವರ ಮುಂದೆ ಹಲವು ಸಮಸ್ಯೆಗಳನ್ನಿಟ್ಟರು. 15 ವರ್ಷಗಳ ಹಿಂದೆ ಆರಂಭಿಸಿದ ಕೈಗಾರಿಕೆಗಳಿಗೆ ನೀಡಲಾಗಿರುವ ಬಿ ಖಾತಾವನ್ನು ರದ್ದು ಮಾಡಿ, ಎಲ್ಲ ಕೈಗಾರಿಕೆಗಳಿಗೆ ಎ ಖಾತೆ ನೀಡಲು ಕ್ರಮ ಕೈಗೊಳ್ಳಬೇಕು. ಹಾರೋಹಳ್ಳಿ ಪ್ರಿಂಟ್ ಪಾರ್ಕ್‌ನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಡೆಯಲು ಹಾಗೂ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಜಿಎಸ್‌ಟಿ ಹಿಂಪಡೆಯುವ (ರೀಫಂಡ್) ಸಂಬಂಧ ಇರುವ ಸಮಸ್ಯೆ ನಿವಾರಿಸಬೇಕು, ನಷ್ಟದಲ್ಲಿರುವ ಕೈಗಾರಿಕೆಗಳಿಗೆ ಬ್ಯಾಂಕ್‌ಗಳಿಂದ ಅತಿಹೆಚ್ಚು ಬಡ್ಡಿ ದರದಲ್ಲಿ ಸಾಲ ನೀಡುವುದು, ತುಮಕೂರಿನಲ್ಲಿ ಉಗ್ರಾಣ ಮತ್ತು ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಸೇರಿ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಕೈಗಾರಿಕೋದ್ಯಮಿಗಳು ಸಚಿವ ಮುರುಗೇಶ ನಿರಾಣಿ ಅವರನ್ನು ಕೋರಿದರು.
Advertisement
ತುಮಕೂರಿನಲ್ಲಿ ವಿಮಾನನಿಲ್ದಾಣತುಮಕೂರಿನಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಪ್ರಮುಖವಾಗಿ ತುಮಕೂರಿನ ಶಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಈಗಾಗಲೆ ತೀರ್ಮಾನಿಸಲಾಗಿದೆ. ಯೋಜನೆ ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು. ನಾನೇ ಮನವಿ ಸಿದ್ಧಪಡಿಸುತ್ತೇನೆ
ರಾಜ್ಯದಲ್ಲಿನ ಕೈಗಾರಿಕೋದ್ಯಮಿಗಳ ಪೈಕಿ ಹೊರರಾಜ್ಯದವರೇ ಹೆಚ್ಚಿದ್ದಾರೆ. ಇಲ್ಲಿನ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯದ ಉದ್ಯಮಿಗಳು ವಿಫಲರಾಗಿದ್ದಾರೆ. ರಾಜ್ಯ ಸರ್ಕಾರದ ಬಳಿ ತಮ್ಮ ಬೇಡಿಕೆ ಇಡಲೂ ರಾಜ್ಯದ ಉದ್ಯಮಿಗಳು ಹಿಂಜರಿಯುತ್ತಿದ್ದಾರೆ. ರಾಜ್ಯದ ಉದ್ಯಮಿಗಳು ಇಲ್ಲಿನ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸರ್ಕಾರದಿಂದ ಸವಲತ್ತು ಪಡೆಯಲು ನಿಮಗೆ ಸಾಧ್ಯವಾಗದಿದ್ದರೆ, ಬೇಡಿಕೆಗಳನ್ನು ತಿಳಿಸಿ ನಿಮ್ಮ ಲೆಟರ್ ಹೆಡ್ ಕೊಡಿ. ಅದರಲ್ಲಿ ನಾನೇ ಮನವಿ, ಬೇಡಿಕೆಯನ್ನು ಮುದ್ರಿಸಿ ಮುಖ್ಯಮಂತ್ರಿ ಸೇರಿ ಸಂಬಂಧಪಟ್ಟ ಸಚಿವರಿಗೆ ನೀಡುತ್ತೇನೆ ಎಂದು ಮುರುಗೇಶ ನಿರಾಣಿ ತಿಳಿಸಿದರು.