ಕೋಲಾರ: ಜಿಲ್ಲೆಯಲ್ಲಿ ಐದು ದಿನಗಳ ಕಾಲ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದು, ಕಳಪೆಯಾಗಿದ್ದರೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನನ್ನ ಈ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸ್ವಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲೇ ಹೇಳಿದಂತೆ ಜಿಲ್ಲೆಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ಬಂದಿದ್ದೇನೆ. ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ, ನನ್ನ ಧ್ವನಿಯೂ ಸಹಾ ಬದಲಾಗಿಲ್ಲ. ಏಕಾಏಕಿ ಬಂದು ಕೆಲಸ ಮಾಡುವುದಲ್ಲ. ಪ್ರತಿ ತಾಲೂಕಿನಲ್ಲಿ ಯಾವ ಕೆಲಸಗಳು ಹೇಗೆ ಆಗಿವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಹಾಗಾಗಿ ಸೋಮವಾರದಂದು ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ. ಮಂಗಳವಾರದಿಂದ ಶುಕ್ರವಾರದವರೆಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಈಗಾಗಲೇ ಕಾಮಗಾರಿ ಪೂರ್ಣಗೊಂಡು, ಅಂತಿಮ ಬಿಲ್ ಪಾವತಿಯಾಗಿರುವುದು, ನಿರ್ವಹಣೆ ಅವಧಿ ಮುಗಿದಿರುವ ಕಾಮಗಾರಿಗಳನ್ನು ಪರಿಶೀಲನೆ ಮಾಡುವ ಅವಶ್ಯಕತೆಯಿಲ್ಲ. ನಿರ್ವಹಣೆ ಅವಧಿ ಪೂರ್ಣಗೊಳ್ಳದೆ ಇರುವಾಗ, ಕಳಪೆ ಕಂಡು ಬಂದರೆ ಪರಿಶೀಲನೆ ಮಾಡಲಾಗುವುದು. ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪರಿಶೀಲನೆ ತಡೆಗೆ ಯಾವುದೇ ಒತ್ತಡವಿಲ್ಲ: ಇಡೀ ಜಿಲ್ಲೆಯಲ್ಲಿ ರಸ್ತೆಗಳು ಹಳ್ಳ-ಗುಂಡಿಗಳು ಇರುವ ಬಗ್ಗೆ ತಪಾಸಣೆ ಮಾಡಲಾಗುವುದು. ಯಾವ ರಸ್ತೆಗಳ ಪರಿಶೀಲನೆ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಿದ್ದೇನೆ. ಲೋಪಗಳು ಕಂಡು ಬಂದಿರುವ ಬಗ್ಗೆ ಪರಿಶೀಲನೆ ನಡೆಸಿ, ಅಪೂರ್ಣ ಕಾಮಗಾರಿಗಳಿಗೆ ಕಾರಣಗಳೇನು, ಕಳಪೆಗೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳುತ್ತೇನೆ ಎಂದರು. ಪರಿಶೀಲನೆ ವಿಚಾರವಾಗಿ ನನಗೆ ಯಾವುದೇ ಒತ್ತಡವಿಲ್ಲ. ನನ್ನನ್ನು ಭೇಟಿ ಮಾಡಿದ ಗುತ್ತಿಗೆದಾರರು ಈ ಬಗ್ಗೆ ಚರ್ಚೆಯಿಲ್ಲ. ಅವರೊಂದಿಗೆ ಸಂಧಾನ ಇನ್ನೊಂದು ಮತ್ತೂಂದು ಏನೂ ಇಲ್ಲ. 5 ದಿನಗಳ ಕಾಲ ನಾನು ಇಲ್ಲೇ ಇರುತ್ತೇನೆ. ಯಾವ ಕಾಮಗಾರಿಗಳು ಗುದ್ದಲಿ ಪೂಜೆ ಆಗಬೇಕು, ಉದ್ಘಾಟನೆ ಆಗಬೇಕು. ಅದನ್ನು ಪೂರ್ಣ ಮಾಡಿಕೊಡಲಾಗುವುದು. ಚುನಾವಣೆ ವರ್ಷ ಆಗಿರುವುದರಿಂದ ಶಾಸಕರಿಗೆ ತೊಂದರೆಯಾಗದಂತೆ ಪೂರ್ಣಗೊಳಿಸಲಾಗುವುದು. ಲೋಕೋಪಯೋಗಿ ಮಾತ್ರವಲ್ಲ. ನನ್ನ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನೂ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಮಾನನಷ್ಟ ಮೊಕದ್ದಮೆ: ಇನ್ನು ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಅದು ಮುಂದುವರಿಯುತ್ತಿದೆ. ಆರೋಪಗಳು ಯಾರು ಬೇಕಾದರೂ ಮಾಡಬಹುದು. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಅದರ ಬಗ್ಗೆ ಮಾತನಾಡಬಾರದು ಎಂದರು. ತಪ್ಪು ಮಾಡಿದ್ದರೆ ಶಿಕ್ಷೆ: ಪ್ರಜಾಪ್ರಭುತ್ವ ವ್ಯವಸ್ಥೆ, ರಾಜಕಾರಣದಲ್ಲಿ ಯಾರು ಯಾರನ್ನು ಬೇಕಾದರೂ ಗುರಿ ಮಾಡಬಹುದು. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ನನ್ನ ವಿರುದ್ಧ ತನಿಖೆ ಮಾಡುವುದಾದರೆ ನಾನೇ ಸ್ವಾಗತಿಸುತ್ತೇನೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು. ವಾಟ್ಸಾಫ್, ಟ್ವಿಟರ್‌ಗಳಲ್ಲಿ ಆರೋಪ ಮಾಡುವುದಕ್ಕೆಲ್ಲವೂ ನಾನು ಉತ್ತರಿಸಲು ಸಾಧ್ಯವಿಲ್ಲ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಾಗದಿರುವುದು, ಜಿಎಸ್‌ಟಿ ಹಾಗೂ ವ್ಯಾಟ್ ಸಮಸ್ಯೆ ಬಗ್ಗೆ ನಮಗೆ ಮನವಿ ಸಲ್ಲಿಸಿದ್ದಾರೆ. ಸಮಸ್ಯೆ ಬಗೆಹರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ, ಕೆ.ಎಸ್.ಮಂಜುನಾಥಗೌಡ, ಮುಖಂಡ ಕೆ.ಚಂದ್ರಾರೆಡ್ಡಿ ಮತ್ತಿತರರಿದ್ದರು.
ಸರ್ಕಾರದಿಂದ ಪ್ರಾಮಾಣಿಕವಾಗಿ ಜನರ ಸೇವೆ : ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಸರ್ಕಾರ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದೆ. 20 ವರ್ಷಗಳಿಂದ ಬಾಕಿ ಇದ್ದ ಮೀಸಲಾತಿ ಕಾರ್ಯವನ್ನು ಮಾಡಿದ್ದೇವೆ. ಅದನ್ನು ಸ್ವಾಗತ ಮಾಡುವ ಮನಸ್ಸಿರಬೇಕು. ಯತ್ನಾಳ್ ಅವರು ನೀಡುವ ಹೇಳಿಕೆಗಳಿಗೆ ಅವರನ್ನೇ ಪ್ರಶ್ನಿಸಬೇಕು. ನನ್ನನ್ನು ಕೇಳಿದರೆ ನಾನು ಏನು ಹೇಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.