ಚಿಂತಾಮಣಿ: ಸ್ಮಶಾನ, ಗುಂಡುತೋಪು, ಗೋಮಾಳ ಇನ್ನಿತರ ಸಾರ್ವಜನಿಕ ಆಸ್ತಿ ಅಕ್ರಮವಾಗಿ ಕಬಳಿಕೆ ಮಾಡಿದ್ದರೆ ಜಿಲ್ಲಾ ಮತ್ತು ತಾಲೂಕು ಆಡಳಿತ ತೆರವು ಕಾರ್ಯ ಚುರುಕುಗೊಳಿಸಬೇಕು ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು ಸೂಚಿಸಿದರು.
ತಾಲೂಕಿನ ಕೈವಾರ ಹೋಬಳಿಯ ಅಟ್ಟೂರು ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತವು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ “ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡವರಿಗೆ, ರೈತರಿಗೆ ಸರ್ಕಾರಿ ಸೌಲಭ್ಯ ತಲುಪಬೇಕು. ಆ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಸಹಕಾರಿಯಾಗಿದೆ. ಅದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಹಣಿ ತಿದ್ದುಪಡಿ: ಜಿಲ್ಲಾಧಿಕಾರಿ ಎನ್. ಎಂ.ನಾಗರಾಜ್ ಮಾತನಾಡಿ, ರೈತರಿಗೆ ಭೂ ಹಕ್ಕು ಮತ್ತು ಮಾಹಿತಿಗೆ ಪಹಣಿ ಅಗತ್ಯವಾಗಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಖುದ್ದು ಮನೆಗೆ ಭೇಟಿ ನೀಡಿ, ರೈತರ ಪಹಣಿ ಸರಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಅವಕಾಶ ಬಳಸಿಕೊಳ್ಳಿ ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಜಾಗೃತಿ: ಕಂದಾಯ ಇಲಾಖೆ ಯಿಂದ ದುರ್ಬಲರಿಗೆ, ವೃದ್ಧರಿಗೆ, ದಿವ್ಯಾಂಗರಿಗೆ, ವಸತಿ ರಹಿತರಿಗೆ ವಸತಿ, ನಿವೇಶನ ಸೇರಿ ಸರ್ಕಾರದ ಸೌಲಭ್ಯಗಳನ್ನು ಗ್ರಾಮ ವಾಸ್ತವ್ಯದ ಮೂಲಕ ಯಶಸ್ವಿಯಾಗಿ ಅರ್ಹರಿಗೆ ನೀಡಲಾಗುತ್ತಿದೆ. ಈ ಕುರಿತು ಎಲ್ಲಾ ಇಲಾಖೆ ಕಾರ್ಯಕ್ರಮಗಳ ಕುರಿತು ಮಳಿಗೆಗಳನ್ನು ಸ್ಥಾಪಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ರೈತರು ಸಾವಯವ ಪದ್ಧತಿಯ ಕೃಷಿ ಅಳವಡಿಸಿಕೊಳ್ಳಬೇಕು. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ, ಗ್ರಾಮದಲ್ಲಿರುವ ಶಾಲಾ ಕೊಠಡಿ, ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಶೀಘ್ರ ಬಗೆಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಸರ್ಕಾರಿ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಕೋರಿದರು. ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಸರ್ಕಾರಿ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಹೇಳಿದರು.
ಪರಿಸರ ಕಾಳಜಿ ಬಗ್ಗೆ ಜಾಗೃತಿ: ನಂತರ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ, ಹಕ್ಕುಪತ್ರ ವಿತರಿಸಲಾಯಿತು. ಸಚಿವರು, ಶಾಸಕ ಕೃಷ್ಣಾರೆಡ್ಡಿ, ಜಿಲ್ಲಾಧಿಕಾರಿ ಅವರನ್ನು ಅಟ್ಟೂರು ಗ್ರಾಮದ ಪ್ರವೇಶ ರಸ್ತೆಯಲ್ಲಿ ಮಹಿಳೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಗ್ರಾಮದಲ್ಲಿ ತಮಟೆ ವಾದನ, ತಳಿರು ತೋರಣ ಕಟ್ಟಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮೊದಲಿಗೆ ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ಆ ನಂತರ ಗ್ರಾಮಸ್ಥರಿಗೆ ಸಸಿ ವಿತರಿಸಲಾಯಿತು. ಜೊತೆಗೆ ಸಸಿ ನೆಟ್ಟು ಮರ ಬೆಳೆಸುವಿಕೆಯ ಮಹತ್ವ, ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಎಸಿ ಡಾ.ಜಿ.ಸಂತೋಷ್‌ಕುಮಾರ್, ತಹಶೀ ಲ್ದಾರ್ ಹನುಮಂತರಾಯಪ್ಪ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ, ಅಟ್ಟೂರು ಗ್ರಾಪಂ ಅಧ್ಯಕ್ಷ ಮಂಜುನಾಥ್, ಮುಖಂಡರಾದ ನರಸಿಂಹಮೂರ್ತಿ, ವೆಂಕಟೇಶ, ಗೋವಿಂದ, ರೇಷ್ಮೆ ಬೆಳೆಗಾರರ ಸಹಕಾರ ಸಂಘದ ನಾಗರಾಜು ಉಪಸ್ಥಿತರಿದ್ದರು