Advertisement

ಬೃಹತ್, ಮಧ್ಯಮ ಕೈಗಾರಿಕೆ ಬೆಳವಣಿಗೆಗೆ ವಲಯವಾರು 7 ವಿಷನ್ ಗ್ರೂಪ್‌ ರಚನೆ: ಎಂ.ಬಿ ಪಾಟೀಲ್

12:47 PM Jun 13, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು ಸರ್ಕಾರ ಆಯ್ದ 7 ವಲಯಗಳಲ್ಲಿ ವಿಷನ್ ಗ್ರೂಪ್ ಗಳನ್ನು (ದೂರದರ್ಶಿ ತಂಡಗಳು) ರಚಿಸಲಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

Advertisement

ಇಲ್ಲಿನ ಖಾಸಗಿ ಹೋಟೆಲಿನಲ್ಲಿ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಸೋಮವಾರ ಸಂಜೆ ವಿಚಾರ ವಿನಿಮಯ ನಡೆಸಿದ ಅವರು, ಈ ನಿರ್ಧಾರವನ್ನು ಪ್ರಕಟಿಸಿದರು. ವಿವಿಧ ದೇಶಗಳ ರಾಯಭಾರಿಗಳೂ ಈ ಸಭೆಯಲ್ಲಿ ಇದ್ದರು.

ಉದ್ಯಮಿಗಳು, ಉನ್ನತಾಧಿಕಾರಿಗಳು ಮತ್ತು ಶಿಕ್ಷಣ ತಜ್ಞರು ಇರುವ ಈ ವಿಷನ್ ಗ್ರೂಪ್ ಗಳು ಸೂಕ್ತ ಮಾರ್ಗದರ್ಶನ ನೀಡಲಿವೆ ಎಂದು ವಿವರಿಸಿದರು.

ಏರೋಸ್ಪೇಸ್‌ ಮತ್ತು ರಕ್ಷಣೆ, ಮಷೀನ್‌ ಟೂಲ್ಸ್, ಇಎಸ್‌ಡಿಎಂ, ಫಾರ್ಮಾ, ಕಬ್ಬಿಣ-ಉಕ್ಕು-ಸಿಮೆಂಟ್‌ ಉತ್ಪಾದನಾ ಕ್ಷೇತ್ರಗಳನ್ನೊಳಗೊಂಡ ಕೋರ್‍‌ ಮ್ಯಾನುಫ್ಯಾಕ್ಚರಿಂಗ್‌, ಸ್ಟಾರ್ಟಪ್ಸ್‌ (ಐ.ಟಿ‌.ಯೇತರ) ಮತ್ತು ಆಟೋ/ವಿದ್ಯುತ್‌ಚಾಲಿತ ಇವು ಹೊಸದಾಗಿ ವಿಷನ್ ಗ್ರೂಪ್ ರಚನೆಯಾಗಲಿರುವ ವಲಯಗಳಾಗಿವೆ. ರಾಜ್ಯದಲ್ಲಿ ಈ ವಲಯಗಳಿಗಾಗಿ ವಿಷನ್ ಗ್ರೂಪ್ ಗಳು ರಚನೆಯಾಗುತ್ತಿರುವುದು ಇದೇ ಮೊದಲು. ಇದಕ್ಕೆ ಮುಂಚೆ ಒಟ್ಟಾರೆ ಉದ್ಯಮದ ಅಭಿವೃದ್ಧಿಗೆ ವಿಷನ್ ಗ್ರೂಪ್ ಇತ್ತು. ಆದರೆ ಇದು ವಲಯವಾರು ಮಟ್ಟದಲ್ಲಿ ಇರಲಿಲ್ಲ ಎಂದರು.

ಮೇಲೆ ತಿಳಿಸಿದ ವಲಯಗಳ ಜೊತೆಗೆ ಭವಿಷ್ಯದ ಸಂಚಾರ ವ್ಯವಸ್ಥೆ, ಗ್ರೀನ್‌ ಹೈಡ್ರೋಜನ್, ಆಹಾರ ಸಂಸ್ಕರಣೆ, ಜವಳಿ, ಉಗ್ರಾಣ ಮತ್ತು ಲಾಜಿಸ್ಟಿಕ್ಸ್‌ ಗಳನ್ನು ಆದ್ಯತೆಯ ವಲಯಗಳೆಂದು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು

Advertisement

ವಿದ್ಯುತ್‌ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಈಗಾಗಲೇ 40 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ದೇಶದ ಪ್ರಪ್ರಥಮ ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್ ಮಂಗಳೂರಿನಲ್ಲಿ ತಲೆಯೆತ್ತಲಿದ್ದು, ಆಸಕ್ತ ಉದ್ಯಮಿಗಳು ಇದಕ್ಕೆ 2.8 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದು ಈಗಾಗಲೇ ಖಾತ್ರಿಗೊಂಡಿದೆ. ಇದಕ್ಕೆ ಬೇಕಿರುವ ಭೂಮಿ, ನೀರು ಮತ್ತಿತರ ಮೂಲಸೌಕರ್ಯ ಒದಗಿಸಲು ಸರಕಾರ ಒತ್ತು ನೀಡಲಿದೆ ಎಂದರು.

ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೇವನಹಳ್ಳಿಯ ಆರ್‍‌ & ಡಿ ಪಾರ್ಕ್‌ನಲ್ಲಿ ‘ಕರ್ನಾಟಕ ಏರೋಸ್ಪೇಸ್‌ ತಂತ್ರಜ್ಞಾನ ಕೇಂದ್ರ’ ತೆರೆಯಲು ಯೋಜಿಸಲಾಗಿದೆ. ಜೊತೆಗೆ, ಸರ್ಕಾರವು ರಾಜ್ಯದಲ್ಲಿ 2.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಗೆ ಇರುವ ಅವಕಾಶಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲಿದೆ ಎಂದು ಇದೇ ವೇಳೆ ಪಾಟೀಲ್‌ ವಿವರಿಸಿದರು.

ಉದ್ಯಮಸ್ನೇಹಿ ವಾತಾವರಣ, ಐಎಫ್ಎಸ್ ಅಧಿಕಾರಿ ನಿಯೋಜನೆ: ಒಟ್ಟಾರೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಪೂರಕವಾದ ಕ್ರಮಗಳನ್ನು ವಹಿಸಲಾಗುವುದು. ಹೆಸರಿಗಷ್ಟೇ ಇರುವ ಏಕಗವಾಕ್ಷಿ ಯೋಜನೆಗೆ ನಿಜ ಅರ್ಥದಲ್ಲಿ ಬದಲಾವಣೆ ತಂದು ಅನಗತ್ಯ‌ ಅಡಚಣೆಗಳನ್ನು ನಿರ್ಮೂಲನೆ ಮಾಡಲಾಗುವುದು. ಬಹುಗವಾಕ್ಷಿಗೆ ಅವಕಾಶ ಇಲ್ಲದಂತೆ‌ ತ್ವರಿತವಾಗಿ ಅನುಮತಿಗಳು ಸಿಗುವ ಹಾಗೆ ಮಾಡಲಾಗುವುದು. ಕೈಗಾರಿಕೆ ಬೆಳವಣಿಗೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ತೆರೆದ ಮನಸ್ಸಿನಿಂದ ಪರಿಶೀಲಿಸಲಾಗುವುದು ಎಂದು ಉದ್ಯಮಿಗಳ ಪ್ರಶ್ನೆಗೆ ಸಚಿವ ಪಾಟೀಲ ಉತ್ತರಿಸಿದರು.

ಕೈಗಾರಿಕೆಗಳ ಸ್ಥಾಪನೆಗೆ ಶೀಘ್ರ ಅನುಮತಿ ಸಿಗುವ ಹಾಗೆ ಮಾಡಲು ನಮ್ಮ ಇಲಾಖೆಯಲ್ಲೇ  ಭಾರತೀಯ ಅರಣ್ಯ ಸೇವೆಯ ಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ನಿಯೋಜಿಸಲಾಗುವುದು. ಇದರಿಂದ ಪರಿಸರ ಸಂಬಂಧಿ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸಿಗಲಿದೆ ಎಂದರು.

ಸಭೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ಕಿರ್ಲೋಸ್ಕರ್, ಟಾಟಾ ಮೋಟಾರ್‍ಸ್‌ನ ಸುಶಾಂತ್‌ ನಾಯಕ್‌, ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ನ ರಾಜೀವ್‌ ಕುಶೂ, ಫಾಕ್ಸ್‌ಕಾನ್‌ ಕಂಪನಿಯ ಉನ್ನತಾಧಿಕಾರಿ ವಿನ್ಸೆಂಟ್‌, ಏಷ್ಯನ್‌ ಪೇಂಟ್ಸ್‌ನ ಅಮಿತ್‌ ಕುಮಾರ್‍‌ ಸಿಂಗ್‌ ಸೇರಿದಂತೆ 30ಕ್ಕೂ ಹೆಚ್ಚು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಉದ್ಯಮ ವಲಯದ ಸಂಘಟನೆಗಳಾದ ಸಿಐಐ, ಎಫ್‌ಐಸಿಸಿಐ, ಎಫ್‌ಕೆಸಿಸಿಐ, ಬಿಸಿಐಸಿ, ಕಾಸಿಯಾ, ಲಘು ಉದ್ಯೋಗ ಭಾರತಿ, ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರೀಸ್‌ ಅಸೋಸಿಯೇಷನ್‌, ಐಎಂಟಿಎಂಎ, ಅವೇಕ್‌, ಅಸೋಚಂ ಮುಂತಾದವುಗಳೂ ಭಾಗವಹಿಸಿದ್ದವು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್‌ ಕೃಷ್ಣ, ಕೆಐಎಡಿಬಿ ಸಿಇಒ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next