Advertisement

Karkala ಪರಶುರಾಂ ಥೀಂ ಪಾರ್ಕ್‌ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ

10:47 PM Sep 23, 2023 | Team Udayavani |

ಕಾರ್ಕಳ: ಪರಶುರಾಮ ಥೀಂ ಪಾರ್ಕ್‌ಗೆ ಭೇಟಿ ನೀಡಿ, ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದೇನೆ. ಅಲ್ಲಿ ಮೊದಲು ಜನರ ಸುರಕ್ಷೆ ದೃಷ್ಟಿಯಿಂದ ಕೆಲಸ ನಡೆಯಬೇಕಾಗಿದೆ. ಮೂರ್ತಿ ನಕಲಿಯೋ ಅಸಲಿಯೋ ಎಂದು ಈಗಲೇ ಹೇಳಲಾಗದು; ತನಿಖೆಯ ಬಗ್ಗೆ ಅನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಖಾತೆ ಸಚಿವೆ, ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

Advertisement

ಕಾರ್ಕಳದ ಬೈಲೂರು ಪರಶುರಾಮ ಥೀಂ ಪಾರ್ಕ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಸಮಯಾವಕಾಶ ಕಡಿಮೆಯಿದ್ದ ಕಾರಣ ಅಧಿಕಾರಿಗಳ ಮೇಲೆ ಒತ್ತಡವಿತ್ತು. ಮೂರ್ತಿಯನ್ನು ತರಾತುರಿಯಲ್ಲಿ ನಿರ್ಮಿಸಲಾಗಿದೆ ಮತ್ತು ಕೆಲವೊಂದು ಬಿಡಿ ಭಾಗಗಳನ್ನು ತಾತ್ಕಾಲಿಕ ನೆಲೆಯಲ್ಲಿ ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಶಾಸಕರ ಗಮನಕ್ಕೂ ತರಲಾಗಿತ್ತು ಎನ್ನುವ ವಿಚಾರವನ್ನು ತಿಳಿದುಕೊಂಡಿದ್ದೇನೆ. ಪ್ರತಿಮೆ ಬಗೆಗಿನ ಪೂರ್ಣ ವರದಿಯನ್ನು ತರಿಸಿಕೊಳ್ಳುವೆ. ಮೂರ್ತಿ ಮಾಡಿದವರಿಗೂ ನೋಟಿಸ್‌ ಜಾರಿ ಮಾಡುತ್ತೇವೆ ಎಂದರು.

ರಾಜಕೀಯ ಇಲ್ಲ
ಇದು ರಾಜಕೀಯದ ವಿಷಯವಲ್ಲ, ಈಗ ಏನಾಗಬೇಕು ಎನ್ನುವುದು ಮುಖ್ಯ. ಥೀಂ ಪಾರ್ಕ್‌ ಪ್ರೇಕ್ಷಣೀಯ ಸ್ಥಳವಾದ್ದರಿಂದ ಮಕ್ಕಳು, ಹಿರಿಯರು ಎಲ್ಲರೂ ಬರುತ್ತಾರೆ. ಆಗ ಏನಾದರು ಅವಘಡ ಸಂಭವಿಸಿದರೇ ಯಾರು ಹೊಣೆ? ಮೂರ್ತಿ ಎತ್ತರದ ಸ್ಥಳದಲ್ಲಿ ಇರುವ ಕಾರಣ ಎಷ್ಟು ಸುರಕ್ಷಿತ ಅನ್ನುವ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.

Advertisement

ಚುನಾವಣೆ ಸಂದರ್ಭ ಅವಸರವಾಗಿ ಅಪೂರ್ಣ ಸ್ಥಿತಿಯಲ್ಲಿ ಉದ್ಘಾಟಿಸಿ ರಾಜಕೀಯವಾಗಿ ಗೆಲುವು ಪಡೆದು ಕೊಂಡಿದ್ದಾರೆ. ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ರಾಜಕಾರಣ ಕ್ಕಿಂತ ಪ್ರೇಕ್ಷಣೀಯ ಸ್ಥಳದ ರಕ್ಷಣೆಯೇ ನನ್ನ ಭೇಟಿಯ ಮುಖ್ಯ ಉದ್ದೇಶ ಎಂದರು.

ಅಪರ ಜಿಲ್ಲಾಧಿಕಾರಿ ಡಾ| ಮಮತಾದೇವಿ, ಕುಂದಾಪುರ ವಿಭಾಗ ಸಹಾಯಕ ಆಯುಕ್ತೆ ರಶ್ಮಿ ಎಸ್‌.ಆರ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್‌ ಅವರಿಂದ ಸಚಿವೆ ಮಾಹಿತಿ ಪಡೆದುಕೊಂಡರು.

ಉದಯ ಶೆಟ್ಟಿ ಮುನಿಯಾಲು, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ದೀಪಕ್‌ ಕೋಟ್ಯಾನ್‌ ಮೊದಲಾದವರಿದ್ದರು.

ಚಪ್ಪಲಿ ಧರಿಸಿ ಅಧಿಕಾರಿ ಪ್ರವೇಶ: ಸಚಿವೆ ಗರಂ
ಪರಶುರಾಮ ಮೂರ್ತಿಯ ತಳಭಾಗದಲ್ಲಿ ಸಚಿವರು ಮೂರ್ತಿ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ಚಪ್ಪಲಿ ಧರಿಸಿ ಬಂದಿದ್ದಾರೆ ಎನ್ನುವ ವಿಚಾರವನ್ನು ಅಲ್ಲಿದ್ದವರು ಯಾರೋ ಪ್ರಸ್ತಾವಿಸಿದರು. ಅಧಿಕಾರಿಗಳ ಕಾಲಿನಲ್ಲಿ ಚಪ್ಪಲಿ ಇರುವುದನ್ನು ಕಂಡ ಸಚಿವೆ ಅಸಮಧಾನಗೊಂಡು ಗರಂ ಆದರು. ಅಧಿಕಾರಿಗಳ ಸಹಿತ ಇತರ ಅನೇಕ ಮಂದಿ ಚಪ್ಪಲಿ ಧರಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next